ಸಿಎಂ ವಿರುದ್ಧ ಆರೋಪಕ್ಕೆ ಸಂಬಂಧಿಸಿ ನಾಳೆ ಬೆಳಗ್ಗೆ 11:30ಕ್ಕೆ ಸಿಬಿಐಗೆ ದಾಖಲೆ ಸಲ್ಲಿಕೆ : ಕಪಿಲ್ ಮಿಶ್ರಾ

ಹೊಸದಿಲ್ಲಿ, ಮೇ 8: ದಿಲ್ಲಿಯ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನನ್ನ ಎದುರಿನಲ್ಲೇ ಸತ್ಯೇಂದ್ರ ಜೈನ್ ಅವರಿಂದ ಹಣ ಪಡೆದಿದ್ದಾರೆ. ಮಂಗಳವಾರ ಬೆಳಗ್ಗೆ 11:30ಕ್ಕೆ ಸಿಬಿಐಗೆ ಈ ಆರೋಪಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸುವುದಾಗಿ ಮಾಜಿ ಸಚಿವ ಕಪಿಲ್ ಮಿಶ್ರಾ ತಿಳಿಸಿದ್ದಾರೆ.
ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಂಬಂಧಿಗಾಗಿ ದಿಲ್ಲಿಯ ಛತರ್ಪುರ್ ನಲ್ಲಿ 7 ಎಕ್ರೆ ಜಮೀನು ಖರೀದಿಗಾಗಿ ಡೀಲ್ ಮಾಡಿದ್ದಾರೆ. ಈ ಸಂಬಂಧ ನಾನು ಸಿಬಿಐನಲ್ಲಿ ಕೇಸು ದಾಖಲಿಸುವೆ" ಎಂದು ಮಾಹಿತಿ ನೀಡಿದರು.
ನಾನು ಬಿಜೆಪಿ ಏಜೆಂಟ್ ಅಲ್ಲ. ಬಿಜೆಪಿ ಸೇರುವುದಿಲ್ಲ.ಆಮ್ ಆದ್ಮಿ ಪಕ್ಷವ ನ್ನು ಬಿಟ್ಟು ಹೋಗುವುದಿಲ್ಲ.ನನ್ನನ್ನು ಆಪ್ ನಿಂದ ಕಿತ್ತು ಹಾಕಲು ಯಾರಿಗೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
"ಆಪ್ ನಲ್ಲಿ 4-5 ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ದಿಲ್ಲಿಯ ಮಹಾನಗರ ಪಾಲಿಕೆ ಚುನಾವಣೆಗೆ ಹಣ ಸಂಗ್ರಹಿಸಲಾಗಿತ್ತು. ಪಂಜಾಬ್ ಚುನಾವಣೆಯ ವೇಳೆಯೂ ಆಪ್ ಟಿಕೆಟ್ ಆಕಾಂಕ್ಷಿಗಳಿಂದ ಹಣ ಸಂಗ್ರಹಿಸಲಾಗಿತ್ತು. ಸಿಎಂ ಕೇಜ್ರಿವಾಲ್ ಬೆಂಬಲಿಗರು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ . ಆದರೆ ನಾನು ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ "ಎಂದು ಹೇಳಿದರು.