''ನಿಮ್ಮ ಮಿತಿಯನ್ನು ದಾಟಬೇಡಿ''-ಗೋರಖ್‌ಪುರದಲ್ಲಿ ಮಹಿಳಾ ಐಪಿಎಸ್ ಅಧಿಕಾರಿಗೆ ಬಿಜೆಪಿ ಶಾಸಕನ ಧಮ್ಕಿ

ಗೋರಖ್‌ಪುರ,ಮೇ 8: ''ನಿಮ್ಮ ಮಿತಿಯನ್ನು ದಾಟಬೇಡಿ'' ಇದು ಮದ್ಯವಿರೋಧಿ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲೀಸರು ಪ್ರಯತ್ನಿಸಿದಾಗ ಸಿಟ್ಟಿನಿಂದ ಕುದಿಯುತ್ತಿದ್ದ ಸ್ಥಳೀಯ ಬಿಜೆಪಿ ಶಾಸಕ ರಾಧಾಮೋಹನ ದಾಸ್ ಅಗರವಾಲ್ ಅವರು ಮಹಿಳಾ ಐಪಿಎಸ್ ಅಧಿಕಾರಿ ಚಾರು ನಿಗಮ್ ಅವರನ್ನು ತರಾಟೆಗೆತ್ತಿಕೊಂಡ ರೀತಿ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ತವರೂರು ಗೋರಖ್‌ಪುರದಲ್ಲಿ ಈ ಘಟನೆ ನಡೆದಿದೆ. ಶಾಸಕರು ಅಧಿಕಾರಿಯನ್ನು ಗದರುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ನಿಗಮ್ ಬಳಿಕ ಕಣ್ಣೀರು ಒರೆಸಿಕೊಳ್ಳುತ್ತಿರುವ ದೃಶ್ಯವೂ ವೀಡಿಯೊದಲ್ಲಿ ದಾಖಲಾಗಿದೆ. ''ನಾನು ಅತ್ತಿರಲಿಲ್ಲ, ಅದು ನನ್ನ ಜಾಯಮಾನವೂ ಅಲ್ಲ. ಆದರೆ ನನ್ನ ಹಿರಿಯ ಅಧಿಕಾರಿಗಳು ನನ್ನನ್ನು ಬೆಂಬಲಿಸಿದಾಗ ಭಾವೋದ್ವೇಗಗೊಂಡಿದ್ದೆ ''ಎಂದು ಶಾಸಕರ ಗದರಿಕೆಯಿಂದಾಗಿ ತಾನು ಅಳತೊಡಗಿದ್ದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸುತ್ತ ಅವರು ಹೇಳಿದರು.
15 ದಿನಗಳ ಹಿಂದೆ ಅಗರವಾಲ್ ಅವರ ನೇತೃತ್ವದಲ್ಲಿ ಪ್ರತಿಭಟನೆಯ ಫಲವಾಗಿ ಬಂದ್ ಆಗಿದ್ದ ಮದ್ಯದಂಗಡಿಗಳ ಪುನರಾರಂಭವನ್ನು ವಿರೋಧಿಸಿ ಮಹಿಳೆಯರ ಗುಂಪೊಂದು ರವಿವಾರ ಬೆಳಿಗ್ಗೆ ರಸ್ತೆತಡೆಯನ್ನು ನಡೆಸಿತ್ತು. ಅವರನ್ನು ಚದುರಿಸಲು ಲಘು ಲಾಠಿಪ್ರಹಾರ ನಡೆಸಿದ್ದ ಪೊಲೀಸರು ಕೆಲವು ಮಹಿಳೆಯರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದಿದ್ದರು. ಪೊಲೀಸ್ ಕಾರ್ಯಾಚರಣೆಯ ವೇಳೆ ನಿಗಮ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.
ಸ್ಥಳಕ್ಕೆ ತಲುಪಿದ ಅಗರವಾಲ್ ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸುವಂತೆ ಪೊಲೀಸರನ್ನು ಆಗ್ರಹಿಸಿದ ಸಂದರ್ಭ ಅವರೊಂದಿಗೆ ಏರಿದ ಧ್ವನಿಯಲ್ಲಿ ಮಾತನಾಡಿದ್ದರು.
ಜನಪ್ರತಿನಿಧಿಯಾಗಿ ಮಹಿಳೆಯರ ಮೇಲೆ ಪೊಲೀಸ್ ದೌರ್ಜನ್ಯದ ವಿರುದ್ಧ ಮಾತನಾಡುವುದು ನನ್ನ ಜವಾಬ್ದಾರಿಯಾಗಿದೆ. ಅವರು ಗರ್ಭಿಣಿ ಮಹಿಳೆಯನ್ನು ಥಳಿಸಿದ್ದರು. ವಯಸ್ಸಾದವರು ಮತ್ತು ಮಕ್ಕಳನ್ನೂ ಅವರು ಬಿಡಲಿಲ್ಲ ಎಂದ ಅಗರವಾಲ್, ನಾನು ಉಪ ವಿಭಾಗಾಧಿಕಾರಿಯೊಂದಿಗೆ ಮಾತನಾಡುತ್ತಿದ್ದಾಗ ನಿಗಮ್ ಅನಗತ್ಯವಾಗಿ ಮಧ್ಯೆ ಪ್ರವೇಶಿಸಿದ್ದರು ಎಂದು ಸಮರ್ಥಿಸಿಕೊಂಡರು.
ಆದರೆ ತಾವು ಪ್ರತಿಭಟನಾಕಾರರ ಮೇಲೆ ದೌರ್ಜನ್ಯವೆಸಗಿದ್ದನ್ನು ನಿರಾಕರಿಸಿರುವ ಪೊಲೀಸರು, ಶಾಸಕರು ನಿಗಮ್ ಜೊತೆ ಅನುಚಿತವಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಿದ್ದಾರೆ.