ಹಿರ್ಗಾನ: ಬಾವಿಗೆ ಬಿದ್ದ "ಬ್ಲ್ಯಾಕ್ ಜಾಗ್ವಾರ್"

ಕಾರ್ಕಳ, ಮೇ 8: ನಾಯಿಯನ್ನು ಅಟ್ಟಿಸಿಕೊಂಡು ಬಂದಿದ್ದ "ಬ್ಲ್ಯಾಕ್ ಜಾಗ್ವಾರ್" (ಕರಿಚಿರತೆ) ಬಾವಿಯೊಂದಕ್ಕೆ ಬಿದ್ದ ಘಟನೆ ತಾಲೂಕಿನ ಹಿರ್ಗಾನ ಗ್ರಾಮದ ಬಾಳೆಹಿತ್ಲುವಿನಲ್ಲಿ ನಡೆದಿದೆ.
ಆದಿಶಕ್ತಿ ರೈಸ್‌ಮಿಲ್ ಬಳಿಯ ನಿವಾಸಿ ರಾಜರಾಮ ಕಡಂಬ ಎಂಬವರ ಮನೆಯ ಬಾವಿಗೆ ಕರಿಚಿರತೆ ಬಿದ್ದಿದೆ. ನಾಯಿಯನ್ನು ಬೇಟಿಯಾಡಿದ ನಂತರ ಒಂದಷ್ಟು ದೂರ ಎಳೆದುಕೊಂಡು ಸಾಗುತ್ತಿರುವ ಸಂದರ್ಭ ಆವರಣವಿಲ್ಲದ 25 ಅಡಿ ಆಳದ ಬಾವಿಗೆ ಬಿದ್ದಿದೆ.
ಚೀರಾಟ ಕೇಳಿತ್ತು: ತಡರಾತ್ರಿಯಲ್ಲಿ ಬಾವಿಗೆ ಬಿದ್ದ ಚಿರತೆಯ ಚೀರಾಟ ಮನೆಯವರಿಗೆ ಕೇಳಿಸಿತು. ಈ ಸಂದರ್ಭ ಮನೆಯವರು ಬಾವಿಗೆ ಇಣುಕಿದ್ದು, ಚಿರತೆ ಕಂಡುಬಂದಿತ್ತು. ಈ ಬಗ್ಗೆ ಮುಂಜಾನೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು.
ಕಾರ್ಯಾಚರಣೆ: ಚಿರತೆಯನ್ನು ಬಾವಿಯಿಂದ ರಕ್ಷಿಸಲು ಸುಮಾರು 2 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಲಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಬಾವಿಗೆ ಏಣಿ ಅಳವಡಿಸಿ, ಬಲೆಯಿಂದ ಮುಚ್ಚಿ ಬೋನು ಹಾಕಿದ್ದರು. ಏಣಿಯ ಮೂಲಕ ಮೇಲೇರಿದ ಕರಿಚಿರತೆ ಬೋನ್‌ನೊಳಗೆ ಬಿದ್ದಿದೆ.
ಕಾರ್ಕಳ ವಲಯ ಅರಣ್ಯಾಧಿಕಾರಿ ದಿನೇಶ್ ಮತ್ತು ಪ್ರಕಾಶ್ ಪೂಜಾರಿ ನೇತೃತ್ವದಲ್ಲಿ ಉಪ ವಲಯರಣ್ಯಾಧಿಕಾರಿ ರಾಜಶೇಖರ್, ಸಿಬ್ಬಂದಿ ಹುಕ್ರಪ್ಪ ಗೌಡ, ಮಂಜುನಾಥ್, ಜಿ.ಕೃಷ್ಣಪ್ಪ, ಕೆ.ಬಾಬು, ಬಾಬು, ಶಮೀನ್, ಜಗದೀಶ್ ಶೇರಿಗಾರ್, ಮಹಂತೇಶ್, ಪಕೀರಪ್ಪ, ಮಿಥುನ್, ಅನ್ವರ್, ಶೇಖರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಹಿರ್ಗಾನ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಶೆಟ್ಟಿ ಮತ್ತು ಸ್ಥಳೀಯರು ಸಹಕರಿಸಿದರು.
ಚಿತ್ರ: ಸಂಪತ್ ನಾಯಕ್, ಕಾರ್ಕಳ