ಯೆನೆಪೊಯ ವಿವಿಯಲ್ಲಿ ಯುವಜನ ರಾಷ್ಟ್ರೀಯ ಐಕ್ಯತಾ ಶಿಬಿರ ಸಮಾರೋಪ

ಮಂಗಳೂರು, ಮೇ 8: ಶಿಕ್ಷಣದ ಅಂತಿಮ ಉದ್ದೇಶವು ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವುದಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಹೇಳಿದರು.
ಯೆನೆಪೊಯ ವಿಶ್ವವಿದ್ಯಾಲಯದಲ್ಲಿ ನಡೆದ ಯುವಜನ ರಾಷ್ಟ್ರೀಯ ಐಕ್ಯತಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತವು ವೈವಿಧ್ಯತೆಗಳಿಂದ ಕೂಡಿದ ದೇಶ. ಭಾರತವು ಮಾನವೀಯತೆ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಸಾಗುತ್ತಿದೆ ಎಂದರು.
ರಾಷ್ಟ್ರೀಯ ಯುವಜನ ಯೋಜನೆ ನಿರ್ದೇಶಕ ಡಾ. ಎಸ್.ಎನ್. ಸುಬ್ಬರಾವ್ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಚಾನ್ಸಲರ್ ಡಾ ವಿನಯ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯೆನೆಪೊಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಶ್ರೀಕುಮಾರ್ ಮೆನನ್ ಸ್ವಾಗತಿಸಿದರು. ಶಿಬಿರದ ಸಂಘಟನಾ ಕಾರ್ಯದರ್ಶಿ ರಾಷ್ಟ್ರೀಯ ಯುವ ಯೋಜನೆಯ ಅನಲ್ ಹೆಬ್ಬಾರ್ ಶಿಬಿರದ ವರದಿಯನ್ನು ಮಂಡಿಸಿದರು.
ಮಂಗಳೂರಿನ ಮಿಲಾಗ್ರಿಸ್ ಚರ್ಚ್ ನ ಧರ್ಮಗುರು ಫಾ. ವೆಲೇರಿಯನ್ ಡಿಸೋಜ ಮತ್ತು ಎಂಫಾರ್ ಕನ್ ಸ್ಟ್ರಕ್ಷನ್ಸ್ ಪ್ರೈ. ಲಿ.ನ ಡಿಜಿಎಂ ಅನಿಲ್ ಭಂಡಾರಿ ಮಾತನಾಡಿದರು.
ಯೆನೆಪೊಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ವಿಜಯ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಂಘಟನಾ ಕಾರ್ಯದರ್ಶಿ ಹಾಗೂ ಯೆನೆಪೊಯ ವಿವಿಯ ಎನ್‌ಎಸ್‌ಎಸ್ ಸಂಯೋಜಕಿ ಡಾ. ಅಶ್ವಿನಿ ಎಸ್. ಶೆಟ್ಟಿ ವಂದಿಸಿದರು.
ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್), ರಾಷ್ಟ್ರೀಯ ಯುವಜನ ಯೋಜನೆ ಮತ್ತು ಯುವಜನ ವ್ಯವಹಾರಗಳ ಸಚಿವಾಲಯ, ಕರ್ನಾಟಕ ಸರಕಾರ ಶಿಬಿರವನ್ನು ಜಂಟಿಯಾಗಿ ಆಯೋಜಿಸಿತ್ತು. 19 ರಾಜ್ಯಗಳಿಂದ ಸುಮಾರು 350 ಎನ್‌ಎಸ್‌ಎಸ್ ಸ್ವಯಂಸೇವಕರು, ಎನ್‌ವೈಪಿ ರಾಜ್ಯ ಸಂಘಟಕರು, ಎನ್‌ಎಸ್‌ಎಸ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.







