ಪೋಸ್ಟ್ ಮ್ಯಾನ್ ನೇಮಕಾತಿ ಪರೀಕ್ಷೆಯಲ್ಲಿ ಮೊಬೈಲ್ ಮೂಲಕ ಉತ್ತರ ನಕಲು: ಓರ್ವನ ಬಂಧನ

ಕಾಸರಗೋಡು, ಮೇ 8: ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್ ಹುದ್ದೆ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆಯಲ್ಲಿ ಮೊಬೈಲ್ ಸಂದೇಶದ ಮೂಲಕ ಉತ್ತರ ನಕಲು ಮಾಡುತ್ತಿದ್ದ ಹರ್ಯಾಣ ನಿವಾಸಿಯೋರ್ವನನ್ನು ಪರೀಕ್ಷಾ ಕೇಂದ್ರದ ಅಧಿಕಾರಿಗಳು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬಂಧಿತನನ್ನು ಹರಿಯಾಣ ಸೋನಿಪತ್ ಗೋರಾರ್‌ನ ಕುಲ್ವಂತ್ (22) ಎಂದು ಗುರುತಿಸಲಾಗಿದೆ.
ಕೇರಳ ಪೋಸ್ಟ್ ಸರ್ಕಲ್ ವ್ಯಾಪ್ತಿಯಲ್ಲಿ ಖಾಲಿ ಇರುವ ಪೋಸ್ಟ್ ಮ್ಯಾನ್-ಮೈಲ್‌ಗಾರ್ಡ್ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ವಿದ್ಯಾನಗರದಲ್ಲಿರುವ ಚಿನ್ಮಯ ವಿದ್ಯಾಲಯದಲ್ಲಿ ಆರಂಭಗೊಂಡಿತ್ತು. ಪರೀಕ್ಷಾ ಹಾಲ್‌ಗೆ ಪ್ರವೇಶಿಸಿದ ಉದ್ಯೋಗಾರ್ಥಿಗಳನ್ನು ಕೂಲಂಕಷವಾಗಿ ತಪಾಸಣೆಗೊಳಪಡಿಸಿದ ಬಳಿಕವಷ್ಟೇ ಅಧಿಕಾರಿಗಳು ಒಳಗೆ ಪ್ರವೇಶ ನೀಡಿದ್ದರು. ಅದರಂತೆ ಹರ್ಯಾಣ ನಿವಾಸಿ ಕುಲ್ವಂತ್ ಪರೀಕ್ಷಾ ಹಾಲ್‌ಗೆ ಪ್ರವೇಶಿಸಿದ್ದನು.
ಪರೀಕ್ಷೆ ಆರಂಭಗೊಂಡಾಗ ಕುಲ್ವಂತ್ ಸಂಶಯಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದುದನ್ನು ಕಂಡ ಅಧಿಕಾರಿ ಶಮೀನಾ ಅಮೀರ್ ಆತನನ್ನು ತಪಾಸಣೆಗೊಳಪಡಿಸಿದಾಗ ಈತನ ಬಳಿ ಮೊಬೈಲ್ ಇರುವುದನ್ನು ಪತ್ತೆಹಚ್ಚಿದ್ದಾರೆ. ಪರೀಕ್ಷೆ ಆರಂಭಗೊಳ್ಳುವ ವೇಳೆ ಮೊಬೈಲ್‌ನಲ್ಲಿ ಪ್ರಶ್ನೆಗಳಿಗೆ ಉತ್ತರ ಸಂದೇಶವಾಗಿ ಬಂದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪರೀಕ್ಷಾ ಕೇಂದ್ರದವರು ಆತನನ್ನು ಮೊಬೈಲ್ ಸಹಿತ ಸೆರೆಹಿಡಿದು ವಿದ್ಯಾನಗರ ಪೊಲೀಸರಿಗೆ ಹಸ್ತಾಂತರಿಸಿದರು.
600ರಷ್ಟು ಪೋಸ್ಟ್ ಮ್ಯಾನ್‌ಗಳ ಹುದ್ದೆಗಾಗಿ ದೇಶಾದ್ಯಂತ ಹಲವು ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಒಂದು ಲಕ್ಷಕ್ಕೂ ಹೆಚ್ಚುಮಂದಿ ಪರೀಕ್ಷೆ ಬರೆದಿದ್ದರು.







