ಒಳಮೀಸಲಾತಿಗೆ ಆಗ್ರಹಿಸಿ ಮಾದಿಗರ ಅರೆಬೆತ್ತಲೆ ಮೆರವಣಿಗೆ

ತುಮಕೂರು, ಮೇ 8: ಒಳಮೀಸಲಾತಿ ಜಾರಿಗೊಳಿಸುವ ಸಲುವಾಗಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರ ಸರಕಾರಕ್ಕೆ ಶಿಫಾರಸು ಕಳುಹಿಸಬೇಕೆಂದು ಆಗ್ರಹಿಸಿ ಮಾದಿಗ ದಂಡೋರ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬೆತ್ತಲೆ ಮೆರವಣಿಗೆ ನಡೆಸಿದರು.
ಎಸ್.ಎಂ.ಕೃಷ್ಣ ಸರಕಾರವಿದ್ದಾಗ ನೇಮಕಗೊಂಡಿದ್ದ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ನೀಡಿ 4 ವರ್ಷ ಕಳೆಯುತ್ತಾ ಬಂದರೂ ರಾಜ್ಯ ಸರಕಾರ ಇದುವರೆಗೂ ವರದಿಯನ್ನು ಚರ್ಚಿಸದೆ ಇರುವುದು ಸರಿಯಲ್ಲ. ಸರಕಾರ ಕೂಡಲೇ ವರದಿಯಲ್ಲಿ ಅಂಶಗಳ ಬಗ್ಗೆ ಚರ್ಚಿಸಿ ಶಿಫಾರಸ್ಸುಗಳ ಜಾರಿಗೆ ಕೇಂದ್ರಕ್ಕೆ ಕಳುಹಿಸಬೇಕೆಂದು ಧರಣಿನಿರತರು ಒತ್ತಾಯಿಸಿದರು.
ವಕೀಲ ಹಾಗೂ ಮೀಸಲಾತಿ ಹೋರಾಟ ಸಮಿತಿ ಶಿವಶಂಕರ್ ಮಾತನಾಡಿ, ಪರಿಶಿಷ್ಟರಲ್ಲಿಯೇ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಮಾದಿಗ ಸಮುದಾಯಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಮೀಸಲು ಪ್ರಮಾಣವನ್ನು ನಿಗದಿಪಡಿಸಲು ನಮ್ಮ ಸಮುದಾಯದ ಮುಖಂಡರಾದ ಡಾ.ಜಿ.ಪರಮೇಶ್ವರ್ ವಿರೋಧ ವ್ಯಕ್ತಪಡಿಸುತ್ತಿರುವುದು ದುರದೃಷ್ಟಕರ. ಇವರ ಧೋರಣೆ ಹೀಗೆಯೇ ಮುಂದುವರೆದರೆ ಅವರ ಸೋಲಿಗೆ ಎಲ್ಲಾ ಮಾದಿಗ ಸಮುದಾಯದವರೂ ಒಗ್ಗೂಡಿ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಹೋರಾಟಗಾರ ಕೊಟ್ಟ ಶಂಕರ್, ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ ಮಾತನಾಡಿದರು.
ಧರಣಿಯಲ್ಲಿ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ನಾಗರಾಜ್ ಗೂಳರಿವೆ, ರಾಜ್ಯ ವಕ್ತಾರ ರಾಘವೇಂದ್ರ ಸ್ವಾಮಿ, ಕೆಂಪರಾಜು, ವೆಂಕಟೇಶ್ ಜೆಸಿಬಿ, ಕೇಬಲ್ ರಘು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಅವರಿಗೆ ಸಲ್ಲಿಸಲಾಯಿತು.







