ನ್ಯಾಯವನ್ನು ಬಯಸಿದ್ದೆ, ಪ್ರತೀಕಾರವನ್ನಲ್ಲ: ಬಿಲ್ಕೀಸ್ ಬಾನು

ಹೊಸದಿಲ್ಲಿ,ಮೇ 8: 2002ರ ಗುಜರಾತ್ ದಂಗೆ ಸಂದರ್ಭದಲ್ಲಿ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು, ಅವಳ ಕುಟುಂಬದ ಹೆಚ್ಚಿನವರು ದುಷ್ಕರ್ಮಿಗಳಿಂದ ಕೊಲೆಯಾಗಿದ್ದರು. ಅದಾಗಿ ಬರೋಬ್ಬರಿ 15 ವರ್ಷಗಳ ಬಳಿಕ ಈಗ ಹೊಸದಾಗಿ ಬದುಕನ್ನು ಆರಂಭಿಸಲು ಸಜ್ಜಾಗುತ್ತಿರುವ ಬಿಲ್ಕೀಸ್ ಬಾನು ತನ್ನ ಹಿರಿಯ ಮಗಳು ನ್ಯಾಯವಾದಿಯಾಗುವ ಕನಸನ್ನು ಕಾಣುತ್ತಿದ್ದಾಳೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಲ್ಕೀಸ್,‘‘ನಾನು ನ್ಯಾಯವನ್ನಷ್ಟೇ ಬಯಸಿದ್ದೆ...ಪ್ರತೀಕಾರವನ್ನಲ್ಲ ’’ಎಂದು ಹೇಳಿದಳು. ನಾಲ್ಕು ದಿನಗಳ ಹಿಂದೆ ಐತಿಹಾಸಿಕ ತೀರ್ಪೊಂದನ್ನು ಪ್ರಕಟಿಸಿದ್ದ ಬಾಂಬೆ ಉಚ್ಚ ನ್ಯಾಯಾಲಯವು ಬಿಲ್ಕೆಸ್‌ಳ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿದ್ದ 12 ಜನರ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿತ್ತಲ್ಲದೆ, ಪೊಲೀಸರು ಮತ್ತು ವೈದ್ಯರು ಸೇರಿದಂತೆ ಏಳು ಜನರನ್ನು ಖುಲಾಸೆಗೊಳಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿತ್ತು.
ದಂಗೆ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದು, ತನ್ನ ಮೂರೂವರೆ ವರ್ಷ ಪ್ರಾಯದ ಮಗಳನ್ನು ಕಳೆದುಕೊಂಡಿದ್ದ ಬಿಲ್ಕೆಸ್ ಒಳ್ಳೆಯ ಜೀವನವನ್ನು ನಡೆಸಲು ನ್ಯಾಯಾಲಯದ ತೀರ್ಪು ತನಗೆ ನೆರವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದಳು. ಘಟನೆಯನ್ನು ಮುಚ್ಚಿ ಹಾಕುವಲ್ಲಿ ಭಾಗಿಯಾಗಿದ್ದ ಪೊಲೀಸರು ಮತ್ತು ವೈದ್ಯರನ್ನೂ ದೋಷಿಗಳೆಂದು ನ್ಯಾಯಾಲಯವು ತೀರ್ಪು ನೀಡಿರುವುು ಇನ್ನಷ್ಟು ಖುಷಿ ತಂದಿದೆ ಎಂದಳು.
ತನ್ನ ಹಿರಿಯ ಮಗಳು ನ್ಯಾಯವಾದಿಯಾಗಲು ಬಯಸಿದ್ದಾಳೆ. ತನ್ನೆಲ್ಲ ಮಕ್ಕಳು ಓದಿ ಹೊಸ ಬದುಕನ್ನು ರೂಪಿಸಿಕೊಳ್ಳುವಂತೆ ಮಾಡುತ್ತೇನೆ ಎಂದು ಬಿಲ್ಕೆಸ್ ನುಡಿದಳು.
ಹಾಲು ಮಾರಾಟಗಾರನಾಗಿರುವ ಬಿಲ್ಕೆಸ್‌ಳ ಪತಿ ಯಾಕೂಬ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಕುಟುಂಬದ ಸಂಕಷ್ಟ ಮತ್ತು ಆಗಾಗ್ಗೆ ಪೆರೋಲ್‌ನಲ್ಲಿ ಹೊರಗೆ ಬರುತ್ತಿದ್ದ ಆರೋಪಿಗಳಿಂದ ಬೆದರಿಕೆಗಳ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ದುಃಖವನ್ನು ತಡೆದುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.
ಎಲ್ಲ ಮಹಿಳೆಯರಿಗೂ ಬಿಲ್ಕೆಸ್‌ಳಂತೆ ನ್ಯಾಯ ದೊರೆಯಬೇಕು ಎಂದ ಅವರು, ಗೋ ಸಂರಕ್ಷಣಾ ಕಾಯ್ದೆ ಮತ್ತು ಗೋರಕ್ಷಕ ಗುಂಪುಗಳಿಂದಾಗಿ ತನ್ನ ಕುಟುಂಬದ ಹೈನುಗಾರಿಕೆ ವೃತ್ತಿಗೆ ಬೆದರಿಕೆ ಎದುರಾಗಿದೆ. ತಾನೀಗ ಕುಟುಂಬವನ್ನು ಪೋಷಿಸಲು ಬೇರೆ ಆದಾಯ ಮಾರ್ಗವನ್ನು ಕಂಡುಕೊಳ್ಳಬೇಕಿದೆ ಎಂದರು.
ಜೈಲಿನಿಂದ ಆಗಾಗ್ಗೆ ಪೆರೋಲ್‌ನಲ್ಲಿ ಹೊರಬರುತ್ತಿದ್ದ ಆರೋಪಿಗಳು ಬಿಲ್ಕೆಸ್‌ಗೆ ಬೆದರಿಕೆಗಳನ್ನು ಒಡ್ಡುತ್ತಿದ್ದರಿಂದ ಈ ನತದೃಷ್ಟ ಕುಟುಂಬವು 15 ವರ್ಷಗಳಲ್ಲಿ 25 ಬಾರಿ ಮನೆಗಳನ್ನು ಬದಲಿಸುವಂತಾಗಿತ್ತು ಎಂದು ಸುದ್ದಿಗೋಷ್ಠಿಯನ್ನು ಏರ್ಪಡಿಸಲು ಬಿಲ್ಕೆಸ್‌ಗೆ ನೆರವಾಗಿದ್ದ ಮಾನವ ಹಕ್ಕು ಕಾರ್ಯಕರ್ತೆ ಫರ್ಹಾ ನಕ್ವಿ ತಿಳಿಸಿದರು.
ಬಿಲ್ಕೆಸ್ ಮತ್ತು ಯಾಕೂಬ್ ದಂಪತಿಗೆ ಐವರು ಮಕ್ಕಳಿದ್ದಾರೆ. ಸಾಮೂಹಿಕ ಅತ್ಯಾಚಾರ ನಡೆದಾಗ ಬಿಲ್ಕೆಸ್ ಐದು ತಿಂಗಳ ಗರ್ಭಿಣಿಯಾಗಿದ್ದು, ಹಿರಿಯ ಮಗಳು ಜೊತೆಯಲ್ಲಿದ್ದಳು.
ಈ ಎಲ್ಲ ವರ್ಷಗಳಲ್ಲಿ ನ್ಯಾಯಕ್ಕಾಗಿ ತನ್ನ ಹೋರಾಟದಲ್ಲಿ ಸರಕಾರದಿಂದ ಯಾವುದೇ ಬೆಂಬಲ ತನಗೆ ದೊರೆಯಲಿಲ್ಲ ಎಂದು ಬಿಲ್ಕೆಸ್ ನಿರಾಶೆಯನ್ನು ವ್ಯಕ್ತಪಡಿಸಿದಳು.
ಬಿಲ್ಕೆಸ್ ಹೇಳಿಕೆಯನ್ನು ಮೊದಲ ಬಾರಿಗೆ ಓದಿದಾಗ ತನಗೆ ಐದು ದಿನಗಳ ಕಾಲ ನಿದ್ರಿಸಲು ಸಾಧ್ಯವಾಗಿರಲಿಲ್ಲ ಎಂದು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ವಿಚಾರಣೆಯಲ್ಲಿ ಆಕೆಯ ಪರ ವಾದಿಸಿದ್ದ ನ್ಯಾಯವಾದಿ ವಿಜಯ ಹಿರೇಮಠ ಹೇಳಿದರು.
ಲೈಂಗಿಕ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಗಳನ್ನೂ ದೋಷಿಗಳೆಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.







