ದೊಡ್ಡಬಸವನಹಳ್ಳಿಯ ಕೆರೆಯಲ್ಲಿ ಬೆಂಕಿಯಜ್ವಾಲೆ!

ಹಾಸನ, ಮೇ 8: ನಗರದ ಹೊರವಲಯದಲ್ಲಿರುವ ಕೈಗಾರಿಕೆ ಪ್ರದೇಶದಲ್ಲಿರುವ ಕೆರೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಹಿಂದೂಸ್ತಾನ್ ಪೆಟ್ರೋಲಿಯಂ ಘಟಕದಿಂದ ಹೊರಬರುವ ತ್ಯಾಜ್ಯಗಳು ತಾಲೂಕಿನ ದೊಡ್ಡಬಸವನಹಳ್ಳಿಯಲ್ಲಿರುವ ದೊಡ್ಡ ಕೆರೆಗೆ ಬಂದು ಸೇರುತ್ತವೆ. ಬೇಸಿಗೆಯಾಗಿರುವುದರಿಂದ ತಾಪಮಾನ ಹೆಚ್ಚಾಗಿ ಕೆರೆಯಲ್ಲಿ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿದೆ. ಪೆಟ್ರೋಲಿಯಂ ತ್ಯಾಜ್ಯಗಳೇ ತುಂಬಿರುವ ಈ ಕೆರೆ ಸಂಪೂರ್ಣ ರಾಸಾಯನಿಕವಾಗಿದೆ. ಈಗಾಗಲೇ ಅನೇಕ ಬಾರಿ ಜಾನುವಾರುಗಳು ಕೆರೆ ನೀರು ಕುಡಿದು ಮೃತಪಟ್ಟಿವೆ ಎನ್ನಲಾಗಿದೆ.
ಕೆರೆಯೊಳಗೆ ಕಾಣಿಸಿಕೊಂಡ ಬೆಂಕಿ ಹಲವು ಗಂಟೆಗಳ ಕಾಲ ಉರಿದು ಮುಗಿಲೆತ್ತರಕ್ಕೆ ಮುಟ್ಟಿದ್ದು, ಸುತ್ತ ಮುತ್ತಲ ತೆಂಗಿನಮರ ಸೇರಿದಂತೆ ಇತರೆ ಮರಗಳು ಬಹುತೇಕ ಸುಟ್ಟು ಹೋಗಿದೆ. ಈ ನೀರನ್ನು ಜಾನುವಾರು, ಪಕ್ಷಿಗಳು ಕುಡಿದರೆ ಸ್ಲೋ ಪಾಯಿಸನ್ ನಿಂದ ನಿಧಾನವಾಗಿ ಸಾಯುತ್ತವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ವ್ಯಾಪ್ತಿಯ ಕೊಳವೆ ಬಾವಿ ನೀರು ಕೂಡ ಪೆಟ್ರೋಲ್ ವಾಸನೆ ಬರುತ್ತಿದ್ದು, ಕುಡಿಯುವ ನೀರಿಗೂ ಹಾಹಾಕಾರ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ಟ್ಯಾಂಕರ್ ಗಳಿಗೆ ಲೋಡ್ ಮಾಡಿ ಉಳಿದ ವೇಸ್ಟೇಜ್ ಇಂಧನವನ್ನು ನೇರವಾಗಿ ಕೆರೆಗೆ ಬಿಡುತ್ತಿರುವುದರಿಂದ ಈ ಕೆರೆಯ ನೀರು ರಾಸಾಯನಿಕವಾಗಿದೆ. ಇದಕ್ಕೆಲ್ಲಾ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.







