ಆಂ.ಪ್ರ: ಪೊಲೀಸ್ ಮೇಲೆ ಹಲ್ಲೆ: ಟಿಡಿಪಿ ಶಾಸಕನ ವಿರುದ್ಧ ಪ್ರಕರಣ ದಾಖಲು

ಅಮರಾವತಿ,ಮೇ 8: ರವಿವಾರ ತಡರಾತ್ರಿ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ದೆಂಡುಲೂರಿನಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಟಿಡಿಪಿ ಶಾಸಕ ಹಾಗು ಸರಕಾರಿ ಸಚೇತಕ ಚಿಂತಾಮಣೇನಿ ಪ್ರಭಾಕರ ಅವರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಎಎಸ್‌ಐ ಜೆ.ಪಾಪಾರಾವ್ ಅವರ ದೂರಿನ ಮೇರೆಗೆ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ದೆಂಡುಲೂರು ಎಸ್‌ಐ ಕಿಶೋರ ಬಾಬು ತಿಳಿಸಿದರು.
ದೆಂಡುಲೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪ್ರಭಾಕರ ಕಳೆದ ತಿಂಗಳು ಸಂಪುಟದಲ್ಲಿ ತನಗೆ ಸ್ಥಾನ ದೊರೆಯದ್ದರಿಂದ ಅಸಮಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ವಿಧಾನಸಭಾ ಸ್ಪೀಕರ್ ಅದನ್ನು ಸ್ವೀಕರಿಸಿರಲಿಲ್ಲ.
ರವಿವಾರ ರಾತ್ರಿ ಸಿಂಗಾವರಂ ಜಂಕ್ಷನ್‌ಗೆ ತೆರಳಿದ್ದ ಪ್ರಭಾಕರ ಗ್ರಾಮವೊಂದರ ಜಾತ್ರೆಯ ಹಿನ್ನೆಲೆಯಲ್ಲಿ ಘನವಾಹನಗಳನ್ನು ಬೇರೆ ಮಾರ್ಗವಾಗಿ ಕಳುಹಿಸುತ್ತಿದ್ದ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದರು. ಕರ್ತವ್ಯ ನಿರತ ಎಎಸ್‌ಐ ಮತ್ತು ಸಿಬ್ಬಂದಿಗಳನ್ನು ಅವಾಚ್ಯವಾಗಿ ಬೈದು ಓರ್ವ ಸಿಬ್ಬಂದಿಯ ಮೇಲೆ ಹಲ್ಲೆಯನ್ನೂ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಇದೇ ಶಾಸಕರು ಎರಡು ವರ್ಷಗಳ ಹಿಂದೆ ಅಕ್ರಮ ಮರಳುಗಾರಿಕೆಯನ್ನು ತಡೆಯಲೆತ್ನಿಸಿದ್ದ ಮಹಿಳಾ ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿ ವಿವಾದಕ್ಕೆ ಸಿಲುಕಿದ್ದರು. ಆದರೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕೃಪೆಯಿಂದಾಗಿ ಆ ಪ್ರಕರಣದಿಂದ ಪಾರಾಗಿದ್ದರು.







