ಮುಡಿಪು: ನಿಟ್ಟೆ ವಿದ್ಯಾಧಿರಾಜ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಉಪಗ್ರಹ ವಿಭಾಗ ಉದ್ಘಾಟನೆ

ಕೊಣಾಜೆ, ಮೇ 8: ಶ್ರೀ ವಿದ್ಯಾಧಿರಾಜ ದತ್ತಿ ಸಂಸ್ಥೆ ಮುಡಿಪು ಹಾಗೂ ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯ ಸಹಭಾಗಿತ್ವದಲ್ಲಿ ಮುಡಿಪುವಿನ ಗೋಪಾಲಕೃಷ್ಣ ದೇವಸ್ಥಾನದ ಬಳಿ ನೂತನವಾಗಿ ನಿರ್ಮಾಣಗೊಂಡ ನಿಟ್ಟೆ ವಿದ್ಯಾಧಿರಾಜ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಉಪಗ್ರಹ ವಿಭಾಗದ ಉದ್ಘಾಟನಾ ಸಮಾರಂಭವು ಸೋಮವಾರ ನಡೆಯಿತು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ನಿಟ್ಟೆ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಎನ್.ವಿನಯ ಹೆಗ್ಡೆ, ವೈದ್ಯರನ್ನು ಜನರು ದೇವರಂತೆ ಕಾಣುತ್ತಾರೆ. ಇದಕ್ಕೆ ಅರ್ಹವಾಗಿ ವೈದ್ಯರು ಸೇವಾನಿಷ್ಠೆಯನ್ನು ಮೆರೆಯಬೇಕು. ಗ್ರಾಮೀಣ ಪದೇಶವಾದ ಮುಡಿಪುವಿನಲ್ಲಿ ಸಮಾಜ ಸೇವಾ ಮನೋಭಾವನೆಯೊಂದಿಗೆ ನಿರ್ಮಾಣಗೊಂಡ ಕೆ.ಎಸ್.ಹೆಗ್ಡೆ ಹೋರರೋಗಿಗಳ ಉಪಗ್ರಹ ಕೇಂದ್ರವು ರೋಗಿಗಳಿಗೆ ಉತ್ತಮ ಮಟ್ಟದ ಚಿಕಿತ್ಸೆಗಳನ್ನು ನೀಡಲು ನಿರ್ಧರಿಸಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿದ್ಯಾಧಿರಾಜ ದತ್ತಿ ಸಂಸ್ಥೆಯ ಅಧ್ಯಕ್ಷ ಎಂ.ನರೇಂದ್ರ ಕಾಮತ್, ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೊಂದಿದ್ದರೆ ನಮ್ಮ ಜೀವನ ಹಸನಾಗುತ್ತದೆ. ಆಸ್ತಿ ಸಂಪತ್ತಿಗಿಂತ ಆರೋಗ್ಯ ಪ್ರಮುಖವಾದುದು. ನಿಟ್ಟೆ ವಿವಿಯ ಸಹಯೋಗದೊಂದಿಗೆ ಮುಡಿಪುವಿನಲ್ಲಿ ಆರಂಭಗೊಂಡ ಈ ಉಪಗ್ರಹ ವಿಭಾಗವು ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶಾಂತರಾಮ ಶೆಟ್ಟಿ, ಉಪಕುಲಪತಿ ಡಾ.ರಮಾನಂದ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಸಚಿವ ಯು.ಟಿ.ಖಾದರ್ ಹೊರರೋಗಿಗಳ ವೈದ್ಯಕೀಯ ಉಪಗ್ರಹ ಕೇಂದ್ರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
ಶ್ರೀ ವಿದ್ಯಾಧಿರಾಜ ದತ್ತಿ ಸಂಸ್ಥೆಯ ಉಪಾಧ್ಯಕ್ಷ ಡಾ.ಸದಾನಂದ ಕಾಮತ್ ಸ್ವಾಗತಿಸಿ, ಖಚಾಂಚಿ ನಾಗೇಶ್ ಎಲ್.ಕಾಮತ್ ವಂದಿಸಿದರು. ಮುಡಿಪು ಕಾಲೇಜಿನ ಉಪನ್ಯಾಸಕಿ ಡಾ.ಲತಾ ಅಭಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಮುಡಿಪುವಿನಲ್ಲಿ ನೂತನವಾಗಿ ಆರಂಭಗೊಂಡ ಕೆ.ಎಸ್.ಹೆಗ್ಡೆ ಹೊರರೋಗಿಗಳ ಉಪಗ್ರಹ ವಿಭಾಗ ವೈದ್ಯರ ಕೊಠಡಿ, ಚಿಕಿತ್ಸಾ ಕೊಠಡಿ, ವಿರಾಮದ ಕೋಣೆ, ಮಿನಿ ಲ್ಯಾಬರೋಟರಿ, ಫಾರ್ಮಸಿ, ದಂತಚಿಕಿತ್ಸಾಲಯ ಮುಂತಾದ ವ್ಯವಸ್ಥೆಗಳಿಂದ ಕೂಡಿದೆ.







