‘‘ನಿಮ್ಮನ್ನು ದೇಶಕ್ಕೆ ಬರಲು ಬಿಡಬಾರದಿತ್ತು’’ : ಅಮೆರಿಕದ ಅಂಗಡಿಯಲ್ಲಿ ಮುಸ್ಲಿಮ್ ಮಹಿಳೆಗೆ ಕಿರುಕುಳ

ವಾಶಿಂಗ್ಟನ್, ಮೇ 8: ಅಮೆರಿಕದ ಅಂಗಡಿಯೊಂದರಲ್ಲಿ ಬಿಳಿಯ ಮಹಿಳೆಯೊಬ್ಬಳು ತನಗೆ ಕಿರುಕುಳ ನೀಡಿದ್ದಾಳೆ ಎಂದು ಮುಸ್ಲಿಮ್ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
‘‘ಅವರು ನಿನ್ನನ್ನು ಒಳಗೆ ಬರಲು ಬಿಡಬಾರದಿತ್ತು. ಈಗ ಓವಲ್ ಕಚೇರಿಯಲ್ಲಿ ಬರಾಕ್ ಒಬಾಮ ಇಲ್ಲ’’ ಎಂಬುದಾಗಿ ಆ ಮಹಿಳೆ ಗಟ್ಟಿಯಾಗಿ ಹೇಳಿದಳು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ವರ್ಜೀನಿಯದ ಅಂಗಡಿಯೊಂದರಲ್ಲಿ ಹಣ ಪಾವತಿಸಲು ಸರತಿ ಸಾಲಿನಲ್ಲಿ ನಿಂತಿದ್ದಾಗ ಮುಸ್ಲಿಮ್ ಮಹಿಳೆಯು ತನ್ನ ಹಿಂದೆ ಇದ್ದ ಬಿಳಿಯ ಮಹಿಳೆಗೆ ಮುಂದೆ ಹೋಗಲು ಅವಕಾಶ ಮಾಡಿಕೊಟ್ಟಾಗ ಬಿಳಿಯ ಮಹಿಳೆ ಈ ರೀತಿಯಾಗಿ ನಿಂದಿಸಿದಳು ಎನ್ನಲಾಗಿದೆ.
ಸರತಿ ಸಾಲಿನಲ್ಲಿ ತನಗೆ ಮುಂದಕ್ಕೆ ಹೋಗಲು ಅವಕಾಶ ಮಾಡಿಕೊಟ್ಟ ಮುಸ್ಲಿಮ್ ಮಹಿಳೆಯತ್ತ ತಿರುಗಿದ ಬಿಳಿಯ ಮಹಿಳೆ, ‘‘ನಿನಗೆ ದೇಶದ ಒಳಗೆ ಬರಲು ಅವರು ಬಿಡಬಾರದಿತ್ತು’’ ಎಂದು ಹೇಳುವುದು ವೀಡಿಯೊವೊಂದರಲ್ಲಿ ಕೇಳುತ್ತದೆ. ವೀಡಿಯೊ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ವೀಡಿಯೊ ಆರಂಭವಾಗುವಾಗ ಇಬ್ಬರ ನಡುವೆ ಘರ್ಷಣೆ ಆರಂಭವಾಗಿರುತ್ತದೆ.
‘‘ನಾನು ನಿನಗೆ ಮುಂದಕ್ಕೆ ಹೋಗಲು ಬಿಡಬಾರದಿತ್ತು’’ ಎಂದು ಮುಸ್ಲಿಮ್ ಮಹಿಳೆ ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ, ‘‘ಅವರು ನಿನ್ನನ್ನು ದೇಶದ ಒಳಗೆ ಬಿಡಬಾರದಿತ್ತು’’ ಎಂದು ಅದಕ್ಕೆ ಪ್ರತಿಯಾಗಿ ಬಿಳಿಯ ಮಹಿಳೆ ಹೇಳುತ್ತಾಳೆ.
‘‘ಇಲ್ಲಿ ಕೇಳಿ! ನಾನು ಇಲ್ಲೇ ಹುಟ್ಟಿದ್ದು’’ ಎಂದು ಮುಸ್ಲಿಮ್ ಮಹಿಳೆ ಉತ್ತರಿಸುತ್ತಾರೆ. ‘‘ಓಹ್.. ಹೌದಾ?... ಈಗ ಒಬಾಮ ಅಧಿಕಾರದಲ್ಲಿಲ್ಲ. ಅಲ್ಲಿ ಈಗ ಯಾರೂ ಮುಸ್ಲಿಮ್ ಇಲ್ಲ’’ ಎಂದು ಬಿಳಿಯ ಮಹಿಳೆ ಪ್ರತಿಕ್ರಿಯಿಸುತ್ತಾಳೆ.
‘‘ಹೌದು, ಆದರೆ ಅವರು ಈಗಲೂ ಅಧ್ಯಕ್ಷರಾಗಿರಬೇಕಿತ್ತು’’ ಎಂದು ಮುಸ್ಲಿಮ್ ಮಹಿಳೆ ಹೇಳುವುದು ಕೇಳಿಸುತ್ತದೆ. ‘‘ಅವರು ಹೋಗಿಯಾಯಿತು, ಅವರು ಹೋಗಿಯಾಯಿತು’’ ಎಂದು ಬಿಳಿಯ ಮಹಿಳೆ ನಗುತ್ತಾ ಹೇಳುತ್ತಾಳೆ. ‘‘ಮುಂದೆ ಅವರು ಜೈಲಿಗೂ ಹೋಗಬಹುದು’’ ಎಂದು ಹೇಳುತ್ತಾ ಕ್ಯಾಮರದತ್ತ ದಿಟ್ಟಿಸುತ್ತಾಳೆ.
ಆಗ ಘಟನೆಯನ್ನು ಚಿತ್ರಿಸುತ್ತಿದ್ದ ಮೂರನೆ ಮಹಿಳೆ ಬಿಳಿಯ ಮಹಿಳೆಗೆ, ‘‘ನೀವು ಸ್ವಲ್ಪ ಹುಚ್ಚರಂತೆ ಕಾಣಿಸುತ್ತಿದ್ದೀರಿ. ಬಹುಷಃ ನಿಮಗೆ ನೆರವಿನ ಅವಶ್ಯಕತೆ ಇದೆ’’ ಎಂದು ಹೇಳುವುದು ವೀಡಿಯೊದಲ್ಲಿ ಕೇಳಿಸುತ್ತದೆ.
‘‘ನಾನು ಸರಿಯಾಗೇ ಇದ್ದೇನೆ’’ ಎಂದು ಬಿಳಿಯ ಮಹಿಳೆ ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ‘‘ಕಿರಾಣಿ ಅಂಗಡಿಯೊಂದರ ಸಾಲಿನಲ್ಲಿ ಅಪರಿಚಿತರೊಂದಿಗೆ ದ್ವೇಷಪೂರಿತ ಸಂಭಾಷಣೆ ನಡೆಸುವುದು ಸರಿಯಲ್ಲ’’ ಎಂದು ಚಿತ್ರೀಕರಿಸುತ್ತಿದ್ದ ಮಹಿಳೆ ಬುದ್ಧಿಮಾತು ಹೇಳುವುದು ದಾಖಲಾಗಿದೆ.







