ಗ್ರಾನೈಟ್ ಸಾಗಿಸುತ್ತಿದ್ದ ಲಾರಿ ಪಲ್ಟಿ: ಓರ್ವ ಮೃತ್ಯು, ನಾಲ್ವರ ಸ್ಥಿತಿ ಗಂಭೀರ

ಬಂಟ್ವಾಳ, ಮೇ 8: ಗ್ರಾನೈಟ್ ಸಾಗಿಸುತ್ತಿದ್ದ ಲಾರಿಯೊಂದು ಚಾಲಕ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಒಬ್ಬರು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಬೆಂಜನಪದವು ಸಮೀಪದ ಕೆಂಪುಗುಡ್ಡೆಯಲ್ಲಿ ಸಂಭವಿಸಿದೆ.
ಮಹೇಶ್ ಎಂಬವರು ಮೃತಪಟ್ಟಿದ್ದು, ಲಾರಿ ಚಾಲಕ ರಿಯಾಝ್ ಸಹಿತ ದಿನೇಶ್, ಬಾಬು ಹಾಗೂ ಮುಖೇಶ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಜನಪದವಿನ ಕುರಿಯಾಲದ ಸುನಿಲ್ ಲೋಬೊ ಎಂಬವರ ಮನೆಗೆ ಸುರತ್ಕಲ್‌ನಿಂದ ಗ್ರಾನೈಟ್ ಸಾಗಿಸುತ್ತಿದ್ದ ಲಾರಿ ಕೆಂಪುಗುಡ್ಡೆಯ ಅಪಾಯಕಾರಿ ತಿರುವಿನಲ್ಲಿ ಸಂಚಾರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಈ ಅವಘಡ ಸಂಭವಿಸಿದೆ. ಮೃತಪಟ್ಟ ಮಹೇಶ್ ಲಾರಿಯ ಹಿಂಬದಿಯಲ್ಲಿ ಗ್ರಾನೈಟ್ ಗಳ ಮೇಲೆ ಕುಳಿತಿದ್ದ. ಪಲ್ಟಿಯಾಗುವ ರಭಸಕ್ಕೆ ಗ್ರಾನೈಟ್ ಗಳು ಅವರ ಮೈಮೇಲೆ ಬಿದ್ದಿದೆ ಎನ್ನಲಾಗಿದೆ.
ಘಟನೆಯ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





