ವಿರೂಪಗೊಳಿಸಿದ ಭಾರತದ ಭೂಪಟ ಮಾರಾಟಕ್ಕಿಟ್ಟ ಅಮಝಾನ್

ಹೊಸದಿಲ್ಲಿ, ಮೇ 8: ವಿವಾದಿತ ಭೂಪ್ರದೇಶಗಳನ್ನು ಕೈಬಿಟ್ಟು ರಚಿಸಲಾದ ಭಾರತದ ಭೂಪಟವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಆನ್‌ಲೈನ್ ಮಾರಾಟದ ವೆಬ್‌ಸೈಟ್ ಅಮಝಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತಕ್ಷಣ ಈ ಭೂಪಟವನ್ನು ಹಿಂಪಡೆಯಬೇಕು ಎಂದು ಬಿಜೆಪಿ ದಿಲ್ಲಿ ಘಟಕದ ವಕ್ತಾರ ತಾಜಿಂದರ್‌ಪಾಲ್ ಬಗ್ಗ ಟ್ವಿಟರ್ ಮೂಲಕ ಅಮಝಾನ್ ಸಂಸ್ಥೆಯನ್ನು ಆಗ್ರಹಿಸಿದ್ದಾರೆ.
ಈ ವೆಬ್‌ಸೈಟ್‌ನಲ್ಲಿ ಇತ್ತೀಚೆಗೆ ನೋಂದಣಿ ಮಾಡಿಕೊಂಡಿರುವ ಅಜ್ಞಾತ ಮಾರಾಟಗಾರನೋರ್ವ ತನ್ನ ಹೆಸರನ್ನು ಡಿಯ್‌ಥಿಂಕರ್ ಎಂದು ತಿಳಿಸಿದ್ದು ಈ ಭೂಪಟಕ್ಕೆ 25.35 ಡಾಲರ್ ಬೆಲೆ ನಮೂದಿಸಿದ್ದಾನೆ. ಇದು ಭೂಆಕಾಶ ಮಾಹಿತಿ ನಿಯಂತ್ರಣ ಕಾಯ್ದೆ 2016ರ ಉಲ್ಲಂಘನೆಯಾಗಿದೆ ಎನ್ನಲಾಗಿದೆ.
ಈ ಕಾಯ್ದೆಯ ಪ್ರಕಾರ ಭಾರತದ ಯಾವುದೇ ಭೂಮಿ ಅಥವಾ ಆಕಾಶದ ಪ್ರದೇಶದ ಬಗ್ಗೆ ಲೇಖನ ಅಥವಾ ಚಿತ್ರ ಪ್ರಕಟಿಸುವ ಮುನ್ನ ಸರಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದನ್ನು ಉಲ್ಲಂಘಿಸಿದವರಿಗೆ 7 ವರ್ಷ ಜೈಲುಶಿಕ್ಷೆ ಅಥವಾ 1ರಿಂದ 100 ಕೋಟಿ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಭಾರತದ ನಕ್ಷೆ ಅಥವಾ ಧ್ವಜಕ್ಕೆ ಅವಮಾನವಾಗುವಂತೆ ವಿರೂಪಗೊಳಿಸಿರುವ ವಸ್ತುಗಳನ್ನು ಈ ಹಿಂದೆಯೂ ಹಲವು ಬಾರಿ ಅಮಝಾನ್ ಸಂಸ್ಥೆ ಮಾರಾಟ ಮಾಡಿ ವಿವಾದಕ್ಕೆ ಕಾರಣವಾಗಿತ್ತು.