ಸುಪ್ರೀಂ ಕೋರ್ಟ್‌ನ ಎಂಟು ನ್ಯಾಯಾಧೀಶರಿಗೆ ಐದು ವರ್ಷಗಳ ಜೈಲುಶಿಕ್ಷೆ ವಿಧಿಸಿದ ನ್ಯಾ.ಕರ್ಣನ್!

ಕೋಲ್ಕತಾ,ಮೇ 8: ತನ್ನ ಮಾನಸಿಕ ಆರೋಗ್ಯದ ಪರೀಕ್ಷೆಗಾಗಿ ಸರ್ವೋಚ್ಚ ನ್ಯಾಯಾಲಯವು ನಿಯೋಜಿಸಿದ್ದ ವೈದ್ಯರ ತಂಡವನ್ನು ಕಳೆದ ವಾರ ವಾಪಸ್ ಕಳುಹಿಸಿದ್ದ ಕೋಲ್ಕತಾ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಸಿ.ಎಸ್.ಕರ್ಣನ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಜಿ.ಎಸ್.ಖೇಹರ್ ಮತ್ತು ಶ್ರೇಷ್ಠ ನ್ಯಾಯಾಲಯದ ಏಳು ನ್ಯಾಯಾಧೀಶರಿಗೆ ಐದು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದ್ದಾರೆ! ಈ ನ್ಯಾಯಾಧೀಶರ ವಿರುದ್ಧದ ಜಾತಿ ತಾರತಮ್ಯ,ಒಳಸಂಚು,ಕಿರುಕುಳ ಮತ್ತು ನ್ಯಾಯಾಂಗ ನಿಂದನೆ ವಿರುದ್ಧ ಕಾನೂನು ಕ್ರಮದ ದುರುಪಯೋಗ ಆರೋಪಗಳು ಸಾಬೀತಾಗಿವೆ ಎಂದು ಅವರು ತನ್ನ ‘ಆದೇಶ ’ದಲ್ಲಿ ಹೇಳಿದ್ದಾರೆ.
ನ್ಯಾಯಾಧೀಶರ ವಿರುದ್ಧ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸುವಂತೆ ನ್ಯಾ.ಕರ್ಣನ್ ಕಳೆದ ವಾರ ಆದೇಶಿಸಿದ್ದರು. ಮರುದಿನವೇ ಸರ್ವೋಚ್ಚ ನ್ಯಾಯಾಲಯದಿಂದ ನಿಯೋಜಿತ ವೈದ್ಯರ ತಂಡವು ಅವರ ಮನೆಯನ್ನು ತಲುಪಿತ್ತು. ತನ್ನ ‘ಮಾನಸಿಕ ಸ್ಥಿತಿಯು ಸ್ಥಿರವಾಗಿದೆ ’ಎಂದು ಹೇಳಿಕೊಂಡಿದ್ದ ಅವರು, ಬಳಿಕ ‘ಪೋಷಕರ (ಕುಟುಂಬ)’ ಅನುಪಸ್ಥಿತಿಯಲ್ಲಿ ತಂಡವು ವೈದ್ಯಕೀಯ ತಪಾಸಣೆ ನಡೆಸುವಂತಿಲ್ಲ ಎಂದು ವಾದಿಸಿದ್ದರು.