ಮಹಿಳೆ ಹತ್ಯೆ ಪ್ರಕರಣ: ಆರೋಪಿ ಬಂಧನ
ಶಿವಮೊಗ್ಗ, ಮೇ 8: ನಗರದ ಹೊರವಲಯದ ಹರಿಗೆ ಬಳಿಯ ಹಾತಿ ನಗರದ ನಿರ್ಜನ ಪ್ರದೇಶದಲ್ಲಿನಡೆದಿತ್ತು ಎನ್ನಲಾದ ಅಪರಿಚಿತ ಮಹಿಳೆಯ ಹತ್ಯೆ ಪ್ರಕರಣ ಭೇದಿಸುವಲ್ಲಿ ತುಂಗಾನಗರ ಠಾಣೆಪೊಲೀಸರುಯಶಸ್ವಿಯಾಗಿದ್ದಾರೆ. ಕೊಲೆ ನಡೆಸಿದ ಆರೋಪದ ಮೇರೆಗೆ ಪೊರಕೆ ವ್ಯಾಪಾರಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ವಿದ್ಯಾನಗರದ ನಿವಾಸಿ ಸುಧಾಕರ್(28) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಗಂಗಮ್ಮ(25) ಹತ್ಯೆಯಾದ ಮಹಿಳೆಯಾಗಿದ್ದಾಳೆ. ಸುಧಾಕರ್ ಪೊರಕೆ ವ್ಯಾಪಾರದ ನಿಮಿತ್ತ ತುಮಕೂರಿನ ಬಾಣಸಂದ್ರಕ್ಕೆ ತೆರಳಿದ್ದರು. ಅಲ್ಲಿನ ರೈಲ್ವೆ ನಿಲ್ದಾಣದ ಬಳಿ ಗಂಗಮ್ಮಳ ಪರಿಚಯವಾಗಿತ್ತು. ಇದಾದ ನಂತರ ಇಬ್ಬರೂ ಆತ್ಮೀಯರಾಗಿದ್ದರು ಎನ್ನಲಾಗಿದೆ.
‘ತನಗೆ ಜೀವನ ನಡೆಸಲು ಸಹಕಾರ ನೀಡಿದರೆ ನಿನ್ನೊಂದಿಗೆ ಜೀವನ ನಡೆಸುತ್ತೇನೆ’ ಎಂದು ಗಂಗಮ್ಮ ತಿಳಿಸಿದ್ದು, ಅದರಂತೆ ಬಾಣಸಂದ್ರದಲ್ಲಿಯೇ ಬಾಡಿಗೆ ಮನೆಯೊಂದನ್ನು ಸುಧಾಕರ್ ಮಾಡಿಕೊಟ್ಟಿದ್ದ ಎನ್ನಲಾಗಿದೆ. ಗಂಗಮ್ಮಳಿಗೆ ಪರ ಪುರುಷರೊಂದಿಗೆ ಸಂಬಂಧ ಹೊಂದಿರುವ ಮಾಹಿತಿ ಸುಧಾಕರ್‌ಗೆ ಗೊತ್ತಾಯಿತು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಯು ಆಕೆಯ ಹತ್ಯೆ ನಡೆಸಲು ತೀರ್ಮಾನಿಸಿದ್ದ ಎಂದು ತಿಳಿದುಬಂದಿದೆ.
ಅದರಂತೆ ಸಂಚು ರೂಪಿಸಿ ಗಂಗಮ್ಮ ಹಾಗೂ ಆಕೆಯ ಮೂರು ವರ್ಷದ ಮಗಳನ್ನು ಬಾಣಸಂದ್ರದಿಂದ ಶಿವಮೊಗ್ಗಕ್ಕೆ ಕರೆತಂದಿದ್ದ. ಹಾತಿ ನಗರದ ಬಳಿ ಚಾಕುವಿನಿಂದ ಗಂಗಮ್ಮಳ ಹತ್ಯೆ ನಡೆಸಿ ಪರಾರಿಯಾಗಿದ್ದ ಎನ್ನಲಾಗಿದೆ.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.







