ಯುಎಇ ಫುಟ್ಬಾಲ್ ಕ್ಲಬ್ ಕೋಚ್ ಆಗಿ ಮರಡೋನ ಆಯ್ಕೆ

ದುಬೈ, ಮೇ 8: ಅರ್ಜೆಂಟೀನದ ಮಾಜಿ ನಾಯಕ ಡಿಯಾಗೊ ಮರಡೋನ ಅವರು ಯುಎಇಯ ಅಲ್-ಫುಜಿರಾ ಫುಟ್ಬಾಲ್ ಕ್ಲಬ್‌ನ ಕೋಚ್ ಆಗಿ ರವಿವಾರ ನೇಮಕಗೊಂಡಿದ್ದಾರೆ.
‘‘ಯುಎಇನ ಅಲ್-ಫುಜಿರಾ ಎಫ್‌ಸಿಯ ನೂತನ ಕೋಚ್ ಆಗಿ ಆಯ್ಕೆಯಾಗಿದ್ದೇನೆಂದು ನಿಮಗೆಲ್ಲಾ ತಿಳಿಸಲು ಸಂತೋಷಪಡುತ್ತಿದ್ದೇನೆ’’ ಎಂದು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಮರಡೋನಾ ತಿಳಿಸಿದ್ದಾರೆ.
56ರ ಪ್ರಾಯದ ಮರಡೋನ ಐದು ವರ್ಷಗಳ ಬಿಡುವಿನ ಬಳಿಕ ಫುಟ್ಬಾಲ್ ಮ್ಯಾನೇಜ್‌ಮೆಂಟ್‌ಗೆ ವಾಪಸಾಗಿದ್ದಾರೆ. ಮರಡೋನಾ 1986ರ ವಿಶ್ವಕಪ್ ವಿಜೇತ ಅರ್ಜೆಂಟೀನ ತಂಡದ ನಾಯಕನಾಗಿದ್ದರು. 1990ರಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅರ್ಜೆಂಟೀನ ತಂಡ ರನ್ನರ್-ಅಪ್ ಪ್ರಶಸ್ತಿ ಗೆದ್ದಾಗ ತಂಡದಲ್ಲಿದ್ದರು.
2008ರಲ್ಲಿ ಅರ್ಜೆಂಟೀನ ಫುಟ್ಬಾಲ್ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದ ಮರಡೋನ 2010ರ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಕ್ಕೆ ಮಾರ್ಗದರ್ಶನ ನೀಡಿದ್ದರು. ಮರಡೋನಾ 2011ರ ಮೇನಲ್ಲಿ ಯುಎಇನ ಮತ್ತೊಂದು ಕ್ಲಬ್ ಅಲ್ ವಾಸ್‌ನ ಕೋಚ್ ಆಗಿ ನೇಮಕಗೊಂಡಿದ್ದರು. ಆದರೆ, ಅವರನ್ನು ಕೇವಲ ಒಂದು ವರ್ಷದಲ್ಲೇ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.
ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟನಿ ಅವರು ಫೆಬ್ರವರಿಯಲ್ಲಿ ಮರಡೋನಾರನ್ನು ಫಿಫಾದ ರಾಯಭಾರಿ ಆಗಿ ನೇಮಕ ಮಾಡಿದ್ದರು.





