ಪಂಜಾಬ್ ಮೇಲೆ ಸವಾರಿಗೆ ಕೋಲ್ಕತಾ ಸಿದ್ಧತೆ

ಮೊಹಾಲಿ, ಮೇ 8: ಹತ್ತನೆ ಆವೃತ್ತಿಯ ಐಪಿಎಲ್‌ನಲ್ಲಿ ನಾಕೌಟ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ಮಂಗಳವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಪಂಜಾಬ್ ತಂಡವನ್ನು ಎದುರಿಸಲಿದೆ.
ರವಿವಾರ ಬೆಂಗಳೂರಿನಲ್ಲಿ ನಡೆದಿದ್ದ ಆರ್‌ಸಿಬಿ ವಿರುದ್ಧದ ಪಂದ್ಯವನ್ನು 6 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದ್ದ ಕೆಕೆಆರ್ ಸತತ ಎರಡು ಸೋಲಿನಿಂದ ಹೊರ ಬಂದಿತ್ತು.
12 ಪಂದ್ಯಗಳಲ್ಲಿ 8ರಲ್ಲಿ ಜಯ ಸಾಧಿಸಿ ಒಟ್ಟು 16 ಅಂಕ ಗಳಿಸಿರುವ ಗೌತಮ್ ಗಂಭೀರ್ ಪಡೆ ಈಗ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದೆ. ಪಂಜಾಬ್ ವಿರುದ್ಧ ಜಯ ಸಾಧಿಸಿ 2ನೆ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ಪಂಜಾಬ್ ತಂಡ ರವಿವಾರ ನಡೆದಿದ್ದ ಪಂದ್ಯದಲ್ಲಿ ಗುಜರಾತ್ ವಿರುದ್ಧ 6 ವಿಕೆಟ್‌ಗಳಿಂದ ಸೋತಿದೆ.
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲುವಿಗೆ 159 ರನ್ ಗುರಿ ಪಡೆದಿದ್ದ ಕೆಕೆಆರ್ ತಂಡ ಮೊದಲ ಆರು ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 105 ರನ್ ಗಳಿಸಿತ್ತು. ಇದು ಐಪಿಎಲ್ ಪವರ್‌ಪ್ಲೇ ವೇಳೆ ದಾಖಲಾದ ಗರಿಷ್ಠ ಸ್ಕೋರಾಗಿದೆ. ಭರ್ಜರಿ ಆರಂಭ ಪಡೆದಿದ್ದ ಕೆಕೆಆರ್ ಇನ್ನೂ 29 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತ್ತು. ಆಲ್‌ರೌಂಡರ್ ಸುನೀಲ್ ನರೇನ್ ಎರಡನೆ ಜಂಟಿ ವೇಗದ ಅರ್ಧಶತಕ(50ರನ್,15 ಎಸೆತ) ಸಿಡಿಸಿದರೆ, ಇನ್ನೋರ್ವ ಆರಂಭಿಕ ಆಟಗಾರ ಕ್ರಿಸ್ ಲಿನ್(50ರನ್, 22 ಎಸೆತ) ನರೇನ್‌ಗೆ ಸಮರ್ಥ ಸಾಥ್ ನೀಡಿದ್ದರು.
ಕೆಕೆಆರ್‌ನ ವಿಕೆಟ್‌ಕೀಪರ್ ರಾಬಿನ್ ಉತ್ತಪ್ಪ ಸ್ನಾಯು ಸೆಳೆತದಿಂದಾಗಿ ಕಳೆದ ಪಂದ್ಯದಲ್ಲಿ ಆಡಿಲ್ಲ. ಮುಂದಿನ ಪಂದ್ಯದಲ್ಲಿ ತಂಡಕ್ಕೆ ವಾಪಸಾಗುವ ನಿರೀಕ್ಷೆಯಿದೆ. ಬೌಲರ್‌ಗಳಾದ ಉಮೇಶ್ ಯಾದವ್, ಕ್ರಿಸ್ ವೋಕ್ಸ್ ಹಾಗೂ ನರೇನ್ ವಿಕೆಟ್ ಕಬಳಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ಮತ್ತೊಂದೆಡೆ, ಪಂಜಾಬ್‌ಗೆ ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ಅಲ್ಪ ಅವಕಾಶವಿದೆ. 11 ಪಂದ್ಯಗಳ ಪೈಕಿ ಕೇವಲ 5ರಲ್ಲಿ ಜಯ ಸಾಧಿಸಿರುವ ಪಂಜಾಬ್ ಒಟ್ಟು 10 ಅಂಕಗಳೊಂದಿಗೆ 5ನೆ ಸ್ಥಾನದಲ್ಲಿದೆ. ನಾಕೌಟ್ ಹಂತಕ್ಕೇರುವ ಅವಕಾಶ ಹೆಚ್ಚಾಗಬೇಕಾದರೆ ಉಳಿದ 3 ಪಂದ್ಯಗಳನ್ನೂ ಗೆಲ್ಲಲೇಬೇಕು. ಗುಜರಾತ್ ವಿರುದ್ಧ ರವಿವಾರ ರಾತ್ರಿ 6 ವಿಕೆಟ್‌ಗಳಿಂದ ಸೋತಿದ್ದ ಪಂಜಾಬ್‌ನ ಪ್ಲೇ-ಆಫ್ ಅವಕಾಶಕ್ಕೆ ತೀವ್ರ ಹಿನ್ನಡೆಯಾಗಿದೆ.
ಆರಂಭಿಕ ಆಟಗಾರ ಹಾಶಿಮ್ ಅಮ್ಲ ಶತಕದ ನೆರವಿನಿಂದ ಪಂಜಾಬ್ 3 ವಿಕೆಟ್‌ನಷ್ಟಕ್ಕೆ 189 ರನ್ ಗಳಿಸಿತ್ತು. ಆದರೆ, ಪಂಜಾಬ್ ಬೌಲರ್‌ಗಳು ಲಯನ್ಸ್ ಆಟಗಾರರನ್ನು ನಿಯಂತ್ರಿಸಲು ವಿಫಲರಾದರು. ಡ್ವೆಯ್ನೆ ಸ್ಮಿತ್(74) ಲಯನ್ಸ್‌ಗೆ ಗೆಲುವು ತಂದರು.
ದಕ್ಷಿಣ ಆಫ್ರಿಕ ಬ್ಯಾಟ್ಸ್‌ಮನ್ ಅಮ್ಲ ಪಂಜಾಬ್‌ನ ಪ್ರಮುಖ ಆಟಗಾರನಾಗಿದ್ದು, ಅವರು ಈ ತನಕ 2 ಶತಕ ಸಹಿತ 400ಕ್ಕೂ ಅಧಿಕ ರನ್ ಗಳಿಸಿದ್ದಾರೆ.







