ಬ್ರೆಝಿಲ್ ಓಪನ್: ಆಂಥೋನಿ ಅಮಲ್‌ರಾಜ್ ರನ್ನರ್-ಅಪ್

ರಿಯೋ ಡಿಜನೈರೊ, ಮೇ 8: ಬ್ರೆಝಿಲ್ ಓಪನ್ ಟೇಬಲ್ ಟೆನಿಸ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಎಡವಿದ ಭಾರತದ ಪೆಡ್ಲರ್ ಆಂಥೋನಿ ಅಮಲ್‌ರಾಜ್ ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರು.
ಇಲ್ಲಿ ನಡೆದ ಫೈನಲ್ ಸುತ್ತಿನ ಪಂದ್ಯದಲ್ಲಿ ಅಮಲ್‌ರಾಜ್ ಅವರು ಬ್ರೆಝಿಲ್‌ನ ಕಾಲ್‌ಡ್ರಾನೊ ಹ್ಯೂಗೊ ವಿರುದ್ಧ 1-4(12-14, 11-9, 7-11, 5-11) ಅಂತರದಿಂದ ಶರಣಾದರು.
ಈ ಹಿಂದೆ ಚಿಲಿ ಓಪನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಅಮಲ್‌ರಾಜ್ ಅವರು ತಮ್ಮದೇ ದೇಶದ ಸೌಮ್ಯಜೀತ್ ಘೋಷ್ ವಿರುದ್ಧ ಸೋತಿದ್ದರು. ಘೋಷ್ ಜೊತೆಗೂಡಿ ಡಬಲ್ಸ್ ಪ್ರಶಸ್ತಿ ಜಯಿಸಲು ಸಮರ್ಥರಾಗಿದ್ದರು.
‘‘ನನ್ನ ಪಾಲಿಗೆ ಬ್ರೆಝಿಲ್ ಓಪನ್ ಉತ್ತಮವಾಗಿತ್ತು. ಫೈನಲ್ ಪಂದ್ಯ ತುಂಬಾ ಕಷ್ಟಕರವಾಗಿತ್ತು. ಎದುರಾಳಿ ಕಾಲ್‌ಡ್ರಾನೊ ವಿರುದ್ಧ ಗೆಲುವು ಸಾಧಿಸುವುದು ಸುಲಭ ಸಾಧ್ಯವಲ್ಲ. ತನ್ನ ಸಾಮರ್ಥ್ಯದಷ್ಟು ಹೋರಾಟ ನೀಡಿದ್ದೇನೆ’’ ಎಂದು ಅಮಲ್‌ರಾಜ್ ಹೇಳಿದ್ದಾರೆ.
ಅತ್ಯಂತ ಪೈಪೋಟಿಯಿಂದ ಕೂಡಿದ್ದ ಸೆಮಿಫೈನಲ್‌ನಲ್ಲಿ ಅಮಲ್‌ರಾಜ್ ಅವರು ಬಲ್ಗೇರಿಯದ ಫಿಲಿಪ್ ಫ್ಲೊರಿಟ್ಜ್‌ರನ್ನು 6-11, 6-11, 11-9, 11-9, 8-11, 11-9, 11-9 ಅಂಕಗಳಿಂದ ಮಣಿಸಿ ಫೈನಲ್‌ಗೆ ತಲುಪಿದ್ದರು.







