ಮೊಬೈಲ್ ಫೋನ್ ನೀಡದ ಪತ್ನಿಗೆ ಬೆಂಕಿ ಹಚ್ಚಿದ ಭೂಪ

ಮುಂಬೈ,ಮೇ 9 : ತನ್ನ ಮೊಬೈಲ್ ಫೋನನ್ನು ನೀಡಲು ನಿರಾಕರಿಸಿದ ಪತ್ನಿಯನ್ನು ಪತಿಯೊಬ್ಬ ಬೆಂಕಿ ಹಚ್ಚಿ ಸಾಯಿಸಲು ಯತ್ನಿಸಿದ ಘಟನೆ ನಗರದ ಉಲ್ಲಾಸನಗರದ ಆಜಾದ್ ನಗರದಿಂದ ಸೋಮವಾರ ವರದಿಯಾಗಿದೆ.
38 ವರ್ಷದ ಸಂತೋಷ್ ಕುಮಾರ್ ಶೇಖ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರೆ ಆತನ ಪತ್ನಿ ಶಮಿ (36) ಬೇರೆಯವರ ಮನೆ ಕೆಲಸ ನಿರ್ವಹಿಸುತ್ತಿದ್ದಳು. ಸೋಮವಾರ ಸಂಜೆ ಯಾವುದೋ ವಿಚಾರಕ್ಕೆ ಪತಿ ಪತ್ನಿಯರಲ್ಲಿ ಜಗಳವಾಗಿದೆ. ಆಗ ಸಂತೋಷ್ ತನ್ನ ಪತ್ನಿಯ ಬಳಿ ಆಕೆಯ ಫೋನ್ ನೀಡುವಂತೆ ಹೇಳಿದ. ನಿರಾಕರಿಸಿದ ಶಮಿ ತಾನು ಕೆಲಸಕ್ಕೆ ಹೋಗುವುದಾಗಿ ಹೇಳಿದಳು. ಸಿಟ್ಟುಗೊಂಡ ಸಂತೋಷ್ ಹತ್ತಿರದ ಅಂಗಡಿಯಿಂದ ಒಂದು ಬಾಟಲಿ ಸೀಮೆ ಎಣ್ಣೆ ಖರೀದಿಸಿ ಕೆಲಸಕ್ಕೆ ಹೊರಟಿದ್ದ ಪತ್ನಿಯನ್ನು ನಿಲ್ಲಿಸಿ ಆಕೆಯ ಮೊಬೈಲ್ ಫೋನ್ ನೀಡುವಂತೆ ಮತ್ತೆ ಹೇಳಿದ. ಆಕೆ ನಿರಾಕರಿಸಿದಾಗ ಸೀಮೆ ಎಣ್ಣೆಯನ್ನು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಓಡಿ ಹೋಗಿದ್ದ. ನಂತರ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆಕೆ ಶೇ 60ರಷ್ಟು ಸುಟ್ಟ ಗಾಯಗಳನ್ನು ಹೊಂದಿದ್ದಾಳೆ.
ಅವರಿಬ್ಬರಿಗೆ ಕೇವಲ ಮೂರು ತಿಂಗಳ ಹಿಂದೆ ಮದುವೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಪತಿ ಪರಾರಿಯಾಗಿದ್ದು ಆತನ ಶೋಧ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಆತ ತನ್ನ ಹುಟ್ಟೂರಲ್ಲಿ ಅಡಗಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.