ನೀಟ್ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿನಿಯ ಒಳಉಡುಪು ಬಿಚ್ಚಿಸಿದ್ದ ಕೇರಳದ ನಾಲ್ವರು ಶಿಕ್ಷಕಿಯರ ಅಮಾನತು

ಕಣ್ಣೂರು,ಮೇ 9: ಸಂಭಾವ್ಯ ವಂಚನೆಗಳನ್ನು ತಡೆಯುವ ಭರದಲ್ಲಿ ರವಿವಾರ ನೀಟ್ ಪರೀಕ್ಷೆಗೆ ಹಾಜರಾಗಲು ಕಣ್ಣೂರು ಜಿಲ್ಲೆಯ ಶಾಲೆಯೊಂದಕ್ಕೆ ಬಂದಿದ್ದ 17ರ ಹರೆಯದ ವಿದ್ಯಾರ್ಥಿನಿಯೋರ್ವಳ ಒಳಉಡುಪನ್ನು ಸಾರ್ವಜನಿಕವಾಗಿಯೇ ಬಲವಂತದಿಂದ ಬಿಚ್ಚಿಸಿದ್ದ ಆರೋಪದಲ್ಲಿ ನಾಲ್ವರು ಶಿಕ್ಷಕಿಯರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಕೇರಳ ಮಾನವ ಹಕ್ಕುಗಳ ಆಯೋಗವು ಜಿಲ್ಲಾ ಪೊಲೀಸ್ ವರಿಷ್ಠರಿಂದ ಈ ಘಟನೆಯ ಕುರಿತು ವರದಿಯನ್ನು ಕೇಳಿತ್ತು. ಹಲವಾರು ಯುವ ಸಂಘಟನೆಗಳು ಶಾಲೆಯ ಹೊರಗೆ ಪ್ರತಿಭಟನೆಯನ್ನು ನಡೆಸಿದ್ದು, ರಾಜ್ಯ ವಿಧಾನಸಭೆಯಲ್ಲಿಯೂ ಈ ವಿಷಯವು ಪ್ರಸ್ತಾವಗೊಂಡು, ಸದಸ್ಯರು ಪಕ್ಷಭೇದ ಮರೆತು ಈ ಕೃತ್ಯವನ್ನು ಖಂಡಿಸಿದ್ದರು.
ನೀಟ್ ಪರೀಕ್ಷೆಯಲ್ಲಿ ವ್ಯಾಪಕಗೊಳ್ಳುತ್ತಿರುವ ವಂಚನೆಗಳನ್ನು ತಡೆಯಲು ಅಧಿಕಾರಿಗಳು ಪರೀಕ್ಷಾರ್ಥಿಗಳಿಗೆ ಕಟ್ಟುನಿಟ್ಟಿನ ಉಡುಪು ಸಂಹಿತೆಯನ್ನು ಹೊರಡಿಸುತ್ತಾರೆ. ಆದರೆ ಈ ವರ್ಷದ ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಗಾಢವರ್ಣದ ಬಟ್ಟೆಗಳು, ಉದ್ದನೆಯ ತೋಳುಗಳು, ಬ್ರೋಚಾ ಮತ್ತು ಬ್ಯಾಡ್ಜ್‌ಗಳು, ಮುಚ್ಚಿದ ಶೂ ಮತ್ತು ಸಾಕ್ಸ್‌ಗಳು ಇದ್ದವಾದರೂ ಬ್ರಾ ಅನ್ನು ಉಲ್ಲೇಖಿಸಲಾಗಿರಲಿಲ್ಲ.
ಜಿಲ್ಲೆಯ ಪಯ್ಯನೂರಿನ ಟಿಐಎಸ್‌ಕೆ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ವಿದ್ಯಾರ್ಥಿನಿ ಭದ್ರತಾ ತಪಾಸಣೆಗೊಳಗಾದ ಸಂದರ್ಭ ಲೋಹ ಶೋಧಕ ಯಂತ್ರವು ಬೀಪ್ ಸದ್ದು ಹೊರಡಿಸಿತ್ತು. ಆಕೆ ಧರಿಸಿದ್ದ ಬ್ರಾದ ಲೋಹದ ಹುಕ್ ಈ ಬೀಪ್ ಶಬ್ದಕ್ಕೆ ಕಾರಣವಾಗಿತ್ತು. ಆಕೆ ಬ್ರಾ ತೆಗೆದು ಹೊರಗಡೆಯಿದ್ದ ತನ್ನ ತಾಯಿಯ ಕೈಗೆ ನೀಡುವವರೆಗೂ ಈ ಶಿಕ್ಷಕಿಯರು ಆಕೆಯನ್ನು ಒಳಗೆ ಹೋಗಲು ಬಿಟ್ಟಿರಲಿಲ್ಲ.
ಇದೊಂದು ಅವಮಾನಕರ ಅನುಭವವಾಗಿತ್ತು. ಇದರಿಂದಾಗಿ ಪರೀಕ್ಷೆಯನ್ನು ಚೆನ್ನಾಗಿ ಬರೆಯಲೂ ತನಗೆ ಸಾಧ್ಯವಾಗಲಿಲ್ಲ ಎಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾಳೆ.
ಇದೀಗ ವಿದ್ಯಾರ್ಥಿನಿಯ ದೂರಿನ ಮೇರೆಗೆ ಕ್ರಮವನ್ನು ಕೈಗೊಂಡಿರುವ ಶಾಲಾಡಳಿತವು ನಾಲ್ವರು ಶಿಕ್ಷಕಿಯರನ್ನು ಅಮಾನತುಗೊಳಿಸಿದ್ದು, ಸಮಗ್ರ ಘಟನೆಯ ಬಗ್ಗೆ ತನಿಖೆ ನಡೆಸಲು ಇಬ್ಬರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ.