ಮೇ 11ರಂದು ದ್ವಿತೀಯ ಪಿಯುಸಿ, 12ರಂದು ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ

ಬೆಂಗಳೂರು, ಮೇ 9: 2016-17ನೆ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಈಗಾಗಲೇ ಮುಗಿದಿದ್ದು, ಮೇ 11ರಂದು ಅಪರಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಪಿಯು ಮಂಡಳಿಯ ನಿರ್ದೇಶಕಿ ಸಿ.ಶಿಖಾಮಣಿ ಖಚಿತಪಡಿಸಿದ್ದಾರೆ.
ಫಲಿತಾಂಶ ಪ್ರಕಟ ವಿಚಾರದಲ್ಲಿ ಸಚಿವ ತನ್ವೀರ್ ಸೇಠ್ ಅವರೊಂದಿಗೆ ಸಮಾಲೋಚನೆ ನಡೆಸಿದ ಶಿಖಾಮಣಿ ಈ ಮಾಹಿತಿ ನೀಡಿದ್ದಾರೆ. ಸರಕಾರದ ಅಧಿಕೃತ ವೆಬ್‍ಸೈಟ್ www.pue.kar.nic.in ನಲ್ಲಿ ಮೇ 11ರಂದು ಅಪರಾಹ್ನ 3 ಗಂಟೆಯಿಂದ ಫಲಿತಾಂಶ ಲಭ್ಯವಾಗಲಿದೆ. ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮಾ.9ರಿಂದ 27ರವರೆಗೆ ನಡೆದಿದ್ದು, ರಾಜ್ಯಾದ್ಯಂತ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಉತ್ತರ ಪತ್ರಿಕೆಯ ಮೌಲ್ಯಮಾಪನ ಮುಗಿದಿದ್ದು, ಮೇ 11ರಂದು ವೆಬ್ ಸೈಟ್ ನಲ್ಲಿ ಹಾಗೂ ಮೇ 12ರಂದು ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದವರು ಹೇಳಿದ್ದಾರೆ.
ಮೇ 12ಕ್ಕೆ ಎಸೆಸೆಲ್ಸಿ ಫಲಿತಾಂಶ: ಪ್ರಸಕ್ತ ಸಾಲಿನ ಎಸೆಸೆಲ್ಸಿ ಫಲಿತಾಂಶ ಮೇ 12ರಂದು ಪ್ರಕಟವಾಗಲಿದೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‍ಸೈಟ್‍ನಲ್ಲಿ ಮೇ 12ರಂದು ಅಪರಾಹ್ನ 3 ಗಂಟೆಗೆ ಹಾಗೂ ಮರುದಿನ ಬೆಳಗ್ಗೆ ಎಲ್ಲಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟನೆ ತಿಳಿಸಿದೆ. ಸರಕಾರಿ ವೆಬ್‍ಸೈಟ್‍ನಲ್ಲಿ ಮಾತ್ರ ಫಲಿತಾಂಶ ಲಭ್ಯವಾಗಲಿದ್ದು, ಯಾವುದೇ ಖಾಸಗಿ ವೆಬ್‍ಸೈಟ್‍ನಲ್ಲಿ ಫಲಿತಾಂಶ ಪ್ರಕಟಕ್ಕೆ ಪರೀಕ್ಷಾ ಮಂಡಳಿ ಅವಕಾಶ ಕಲ್ಪಿಸಿಲ್ಲ.







