ಮೇ 10: ಅಧ್ಯಯನ ಶಿಬಿರ ಮತ್ತು ಆಧ್ಯಾತ್ಮಿಕ ಮಜ್ಲಿಸ್
ವಿಟ್ಲ, ಮೇ 9: ದಾರಿಮೀಸ್ ಅಸೋಸಿಯೇಶನ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ಅಧ್ಯಯನ ಶಿಬಿರ ಹಾಗೂ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮವು ಮೇ 10 ರಂದು ಬೆಳಗ್ಗೆ 9:30ರಿಂದ ಅಪರಾಹ್ನ 3 ಗಂಟೆಯವರೆಗೆ ಪಾಣೆಮಂಗಳೂರು ಸಮೀಪದ ನೆಹರೂ ನಗರ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಜಿಲ್ಲಾ ದಾರಿಮೀಸ್ ಅಧ್ಯಕ್ಷ ಕೆ.ಬಿ. ಅಬ್ದುಲ್ ಖಾದರ್ ದಾರಿಮಿ ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಮುಶಾವರ ಅಧ್ಯಕ್ಷ ಸೈಯದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ಉದ್ಘಾಟಿಸಲಿದ್ದು, ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ದುಆ ನೆರವೇರಿಸುವರು ಎಂದರು.
ಕಾರ್ಯಕ್ರಮದಲ್ಲಿ ನೆಹರೂನಗರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಎಸ್. ಅಬ್ದುಲ್ ಹಮೀದ್, ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್.ಬಿ. ಮಹಮ್ಮದ್ ದಾರಿಮಿ, ಮೌಲಾನ ಮುಹಮ್ಮದ್ ಸಲೀಂ ದಾರಿಮಿ ಮಲಪ್ಪುರಂ, ಬಿ.ಕೆ. ಅಬ್ದುಲ್ ಖಾದಿರ್ ಅಲ್-ಖಾಸಿಮಿ ಬಂಬ್ರಾಣ, ಕೋಟೆಕಾರ್ ಮುದರ್ರಿಸ್ ಹಾರೂನ್ ಅಹ್ಸನಿ, ಉಳ್ಳಾಲ ಜುಮಾ ಮಸೀದಿ ಖತೀಬ್ ಶಮೀವ್ ಸಖಾಫಿ, ಕೋಟೆಕಾರ್ ಸಹ ಮುದರ್ರಿಸ್ ಝೈನ್ ಸಖಾಫಿ ಮೊದಲಾದವರು ಭಾಗವಹಿಸುವರು ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ದಾರಿಮೀಸ್ ಸಂಚಾಲಕ ಅಬ್ದುಲ್ ಶುಕೂರ್ ದಾರಿಮಿ, ಎಸ್ಕೆಎಸ್ಸೆಸ್ಸೆಫ್ ಮುಡಿಪು ಕ್ಲಸ್ಟರ್ ಅಧ್ಯಕ್ಷ ಜಾಫರ್ ಶರೀಫ್ ಮುಸ್ಲಿಯಾರ್, ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಪಿ.ಎಂ. ಅಬ್ದುಲ್ ಹಕೀಂ ಪರ್ತಿಪ್ಪಾಡಿ ಉಪಸ್ಥಿತರಿದ್ದರು.







