ನೀಟ್ ಗೆ ಹಾಜರಾದ ವಿದ್ಯಾರ್ಥಿಗಳ ಹೆತ್ತವರಿಗೆ ಆಶ್ರಯ ಒದಗಿಸಿದ ಕೇರಳದ ಮಸೀದಿ

ನವದೆಹಲಿ, ಮೇ, 9 : ದೇಶದಾದ್ಯಂತ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಗಾಗಿ ನೀಟ್ ರವಿವಾರದಂದು ಹಲವು ಗೊಂದಲಗಳ ಹೊರತಾಗಿಯೂ ನಡೆಯಿತು. ಕೇರಳದ ಕಣ್ಣೂರಿನ ಕೇಂದ್ರವೊಂದರಲ್ಲಿ ಹಲವು ವಿದ್ಯಾರ್ಥಿನಿಯರು ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸಂಕಷ್ಟಕ್ಕೀಡಾದ ಪ್ರಸಂಗಗಳೂ ನಡೆದಿದ್ದವು. ಇವೆಲ್ಲವುಗಳ ನಡುವೆ ಬೆಳ್ಳಿ ರೇಖೆಯಂತಿದೆ ಕೇರಳದ ಅಲುವ ಪಟ್ಟಣದಲ್ಲಿ ನಡೆದ ಘಟನೆಯೊಂದು. ಹಲವಾರು ವಿದ್ಯಾರ್ಥಿಗಳು ಇಲ್ಲಿನ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದರೆ, ಅವರಿಗಾಗಿ ಕಾದು ಕುಳಿತ ಅವರ ಹೆತ್ತವರಿಗೆ ಸ್ಥಳೀಯ ಮಸೀದಿಯೊಂದು ಪರೀಕ್ಷೆ ಮುಗಿಯುವ ತನಕ ದಣಿವಾರಿಸಿಕೊಳ್ಳಲು ಆಶ್ರಯ ನೀಡಿ ಆಹಾರವನ್ನೂ ಒದಗಿಸಿ ಮಾನವೀಯತೆ ಮೆರೆದಿದೆ.
ರವಿವಾರ ಬೆಳಗ್ಗೆ ವಾದಿ ಹುದಾ ಟ್ರಸ್ಟ್ ಕಾರ್ಯದರ್ಶಿ ಮುಹಮ್ಮದ್ ನವಾಝ್ ಮತ್ತವರ ಸ್ನೇಹಿತರು ತಮ್ಮ ಬೆಳಗಿನ ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರಬಂದಾಗ ಅಲ್ಲಿ ಹಲವಾರು ಮಂದಿ ತಮ್ಮ ತಮ್ಮ ವಾಹನಗಳ ಬಳಿ ನಿಂತಿದ್ದರು. ಅವರನ್ನು ವಿಚಾರಿಸಲಾಗಿ ಅವರೆಲ್ಲಾ ದೂರದೂರದಿಂದ ತಮ್ಮ ಮಕ್ಕಳು ನೀಟ್ ಗೆ ಹಾಜರಾಗಲು ಕರೆತಂದಿದ್ದವರೆಂದು ತಿಳಿಯಿತು.
ಹೆಚ್ಚಿನವರು ಆಯಾಸಗೊಂಡಿದ್ದರು ಹಾಗೂ ನೀರು ಮತ್ತು ಆಹಾರ ಎಲ್ಲಿಯಾದರೂ ಸಿಗಬಹುದೇ ಎಂದು ಹುಡುಕುತ್ತಿದ್ದರು ಎಂದು ತಿಳಿದ ಮುಹಮ್ಮದ್, ಅವರು ಸ್ಥಳೀಯ ಜನರೊಂದಿಗೆ ಸೇರಿ ಅಲ್ಲಿನ ಟೀ ಶಾಪ್ ಮಾಲಕರೊಬ್ಬರನ್ನು ಕರೆಯಿಸಿ ಅವರು ಆ ದಿನ ಅಂಗಡಿ ಮುಚ್ಚಿದ್ದರೂ ತೆರೆಯುವಂತೆ ಹೇಳಿ ಅಲ್ಲಿದ್ದ ಹೆತ್ತವರಿಗೆ ಚಹಾ ದೊರೆಯುವಂತೆ ನೋಡಿಕೊಂಡರು. ಹತ್ತಿರದ ನೀರು ಶುದ್ಧೀಕರಣ ಘಟಕದಿಂದ ನೀರು ತಂದು ಅಲ್ಲಿದ್ದವರಿಗೆ ಶರಬತ್ತು ತಯಾರಿಸಿ ಕೊಟ್ಟರು. ಸ್ವಲ್ಪ ಸಮಯದ ನಂತರ ಅಲ್ಲಿದ್ದ ಕೆಲವರು ಸ್ಥಳೀಯ ಕೆಲ ಮನೆಗಳಲ್ಲಿ ಆಶ್ರಯ ಪಡೆದರೆ, ಇನ್ನು ಕೆಲವರು ಇನ್ನೂ ಬಿರುಬಿಸಿಲಿನಲ್ಲಿ ನಿಂತಿರುವುದನ್ನು ಕಂಡು ಟ್ರಸ್ಟ್ ಪದಾಧಿಕಾರಿಗಳು ಅವರನ್ನು ಮಸೀದಿಗೆ ಕರೆದೊಯ್ದರು. ಅಲ್ಲಿ ಅವರು ತಮ್ಮ ಮಕ್ಕಳ ಪರೀಕ್ಷೆ ಮುಗಿಯುವ ತನಕ ಕುಳಿತು ನಂತರ ಅಲ್ಲಿನವರಿಗೆ ಧನ್ಯವಾದ ತಿಳಿಸಿ ಧನ್ಯತೆಯಿಂದ ಹೊರನಡೆದರು.