ಮೇ.11: ಮೇಲ್ದರ್ಜೆಗೇರಿದ ಪುತ್ತೂರು ಬ್ಲಡ್ ಬ್ಯಾಂಕ್ ಉದ್ಘಾಟನೆ
ಪುತ್ತೂರು,ಮೇ 9: ಹತ್ತೊಂಬತ್ತು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಸ್ಥಾಪನೆಯಾದ ಖಾಸಗಿ ಸಹಭಾಗಿತ್ವದ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಈಗ ಮೇಲ್ದರ್ಜೆಗೇರಿದ್ದು, ಸರ್ವ ಸುಸಜ್ಜಿತ ಬ್ಲಡ್ ಬ್ಯಾಂಕ್ ಮೇ 11ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಅಶೋಕ್ ಪಡಿವಾಳ್ ತಿಳಿಸಿದ್ದಾರೆ.
ಮೇ 11 ರಂದು ಪೂರ್ವಾಹ್ನ 9.30ಕ್ಕೆ ಮೇಲ್ದರ್ಜೆಗೇರಿದ ಬ್ಲಡ್‌ಬ್ಯಾಂಕ್ ಲೋಕಾರ್ಪಣೆ ನಡೆಯಲಿದೆ. ಇದಾದ ಬಳಿಕ ಪಕ್ಕದ ಜೈನ ಭವನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಡಾ.ಆರ್.ಎಸ್. ನಾಗಾರ್ಜುನ ಅವರು ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಶಕುಂತಳಾ ಶೆಟ್ಟಿ, ಮಂಗಳೂರು ಎಂಆರ್‌ಪಿಎಲ್ ಸಂಸ್ಥೆಯ ಆಡಳಿತ ನಿರ್ದೇಶಕ ಎಚ್. ಕುಮಾರ್, ರೋಟರಿ ಜಿಲ್ಲೆ 3181ರ ಡಿಆರ್‌ಎಫ್‌ಸಿ ಆಗಿರುವ ಕೃಷ್ಣ ಶೆಟ್ಟಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ರೋಟರಿ ಜಿಲ್ಲೆ 3181ರ ವಲಯ ಐದರ ಸಹಾಯಕ ಗವರ್ನರ್ ಶ್ಯಾಮ್ ಸುಂದರ ರೈ, ರೋಟರಿ ಜಿಲ್ಲೆ 3181ರ ವಲಯ ಐದರ ವಲಯ ಲೆಫ್ಟಿನೆಂಟ್ ಆಸ್ಕರ್ ಆನಂದ್ ಭಾಗವಹಿಸಲಿದ್ದಾರೆ ಎಂದು ನುಡಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 1998ರಲ್ಲಿ ಪುತ್ತೂರಿನಲ್ಲಿ ಬ್ಲಡ್‌ಬ್ಯಾಂಕ್ ಸ್ಥಾಪನೆಯಾಗಿದ್ದು, ಕಳೆದ 19 ವರ್ಷಗಳ ಅವಧಿಯಲ್ಲಿ ಪ್ರತೀ ತಿಂಗಳು ಸುಮಾರು 350 ಯೂನಿಟ್ ರಕ್ತವನ್ನು ಸ್ವಯಂ ಪ್ರೇರಿತ ದಾನಿಗಳೊಂದಿಗೆ ಸಂಗ್ರಹಿಸುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದೆ ಈ ತನಕ ಸುಮಾರು 60,000 ಯೂನಿಟ್ ರಕ್ತ ಸಂಗ್ರಹಿಸಿ ಅವಶ್ಯಕತೆ ಇರುವವೆರಿಗೆ ನೀಡಲಾಗಿದೆ. ಪಕ್ಕದ ಕೊಡಗು ಜಿಲ್ಲೆ, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಕಾಸರಗೋಡು ಭಾಗದ ನೂರಾರು ಜನ ಈ ರಕ್ತ ಬ್ಯಾಂಕ್‌ನ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.
ರೂ. 85 ಲಕ್ಷ ರೂ. ವೆಚ್ಚದಲ್ಲಿ ಇದೀಗ ಬ್ಲಡ್‌ಬ್ಯಾಂಕನ್ನು ಮೇಲ್ದರ್ಜೆಗೇರಿಸಲಾಗಿದೆ. ಈ ಯೋಜನೆಗೆ ರೋಟರಿ ಅಂತಾರಾಷ್ಟ್ರೀಯ ಫೌಂಡೇಶನ್ ರೂ. 52 ಲಕ್ಷ ನೀಡಿದೆ. ಉಳಿದ ಹಣವನ್ನು ಬಹುತೇಕ ರೊಟೇರಿಯನ್‌ಗಳು ದೇಣಿಗೆ ನೀಡಿದ್ದು, ಒಂದಷ್ಟು ಮೊತ್ತ ದಾನಿಗಳಿಂದಲೂ ಸಿಕ್ಕಿದೆ. ಈ ಪ್ರದೇಶದ ಜನರಿಗೆ ಒಂದು ಸುಸಜ್ಜಿತ ಬ್ಲಡ್ ಬ್ಯಾಂಕ್ ಬೇಕು ಎಂಬ ರೋಟರಿ ಕ್ಲಬ್‌ನ ಆಶಯದಂತೆ ಈ ಮೆಗಾ ಯೋಜನೆಗೆ ಅನುಷ್ಠಾನಕ್ಕೆ ಬರುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಸಂಸ್ಥೆ ಮತ್ತು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಸಂಸ್ಥೆಯ ಪ್ರಮುಖರಾದ ಸುಧಾ ಎಸ್. ರಾವ್, ಬಾಲಕೃಷ್ಣ ಆಚಾರ್ಯ, ಪರಮೇಶ್ವರ ಗೌಡ, ಆಸ್ಕರ್ ಆನಂದ್, ಎಂ.ಜಿ. ರಫೀಕ್ ಉಪಸ್ಥಿತರಿದ್ದರು.







