ಇವಿಎಂ ನ್ನು ಹೇಗೆ ತಿರುಚಬಹುದು ಎಂಬ ಬಗ್ಗೆ ಆಪ್ ಶಾಸಕನಿಂದ ಪ್ರಾತ್ಯಕ್ಷಿಕೆ

ಹೊಸದಿಲ್ಲಿ, ಮೇ9: ದಿಲ್ಲಿ ವಿಧಾನ ಸಭೆಯ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಇವಿಎಂ (ವಿದ್ಯುನ್ಮಾನ ಮತಯಂತ್ರ) ವಿಷಯಕ್ಕೆ ಸಂಬಂಧಿಸಿ ಉಂಟಾದ ಗದ್ದಲದ ನಡುವೆಯೂ ಇವಿಎಂ ಅನ್ನು ಹೇಗೆ ತಿರುಚಬಹುದು ಎಂಬ ಬಗ್ಗೆ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ವಿಧಾನಸಭೆಯಲ್ಲಿ ಪ್ರಾತ್ಯಕ್ಷಿಕೆ ನಡೆಸಿ ಗಮನ ಸೆಳೆದರು.
ವಿಧಾನಸಭೆಯ ವಿಶೇಷ ಕಲಾಪ ಆರಂಭವಾಗುತ್ತಿದ್ದಂತೆ ಇವಿಎಂ ವಿಷಯ ಪ್ರಸ್ತಾಪಿಸಿದ ಆಪ್ ಶಾಸಕಿ ಆಲ್ಕಾ ಲಾಂಬಾ ಅವರು, ಇವಿಎಂಗಳ ಬಗ್ಗೆ ತಿಳಿದುಕೊಳ್ಳುವ ಅಧಿಕಾರ ಸಾರ್ವಜನಿಕರಿಗೆ ಇದೆ ಎಂದು ಸದನದ ಗಮನ ಸೆಳೆದರು. ಆಗ ಧ್ವನಿಗೂಡಿಸಿದ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ಮತದಾರರು ಇವಿಎಂ ಮೂಲಕ ತಾವು ಹಾಕಿದ ಮತಗಳು ತಮ್ಮ ಅಭ್ಯರ್ಥಿಗೆ ಹೋಗುತ್ತದೆ ಎಂದು ನಂಬಿದ್ದಾರೆ. ಆದರೆ ಇವಿಎಂ ಯಂತ್ರವನ್ನು ಪೂರ್ಣವಾಗಿ ನಂಬುವಂತಿಲ್ಲ. ಫಲಿತಾಂಶವನ್ನು ತಿರುಚಲಾಗುತ್ತದೆ.
ಮತದಾರನ ಸೋಗಿನಲ್ಲಿ ರಹಸ್ಯ ಕೋಡ್ ಬಳಸಿ ತಮಗಿಷ್ಟದ ಅಭ್ಯರ್ಥಿಯನ್ನು ಆರಿಸಲು ಸಾಧ್ಯವಿದೆ ” ಎಂದು ಹೇಳುವ ಮೂಲಕ ಪ್ರಾತ್ಯಕ್ಷಿಕೆ ಮೂಲಕ ಸ್ಫೋಟಕ ಮಾಹಿತಿ ನೀಡಿದರು.
ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಹತ್ತು ವರ್ಷಗಳ ಅನುಭವ ಹೊಂದಿರುವ ಭಾರದ್ವಾಜ್ ಅವರು ಯಾವುದೇ ಯಂತ್ರವನ್ನು ಹ್ಯಾಕ್ ಮಾಡಲು ಸಾಧ್ಯವಿದೆ. ಮತದಾನದ ಬಳಿಕ ಎಷ್ಟು ಮತದಾನವಾಗಿದೆ ಎಂದು ತಿಳಿಯಲು ಗುಪ್ತ ಕೋಡ್ ಬಳಸಲಾಗುತ್ತಿದೆ. ಹಾಗೆಯೇ ಗುಪ್ತ ಕೋಡ್ ಬಳಸಿ ಮತ ಯಂತ್ರದಲ್ಲಿ ದಾಖಲಾದ ಫಲಿತಾಂಶವನ್ನು ತಿರುಚಿ ಫಲಿತಾಂಶವನ್ನು ಒಂದು ಪಕ್ಷದ ಪರ ಮಾಡಲು ಸಾಧ್ಯವಿದೆ ಎಂದು ಹೇಳಿದರು.
"ದೇಶದ ವಿವಿಧ ಭಾಗಗಲ್ಲಿ ನಡೆದಿರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಇವಿಎಂ ಯಂತ್ರ ಕಾರಣವಾಗಿದೆ. ಇದೇ ರೀತಿ ಇವಿಎಂ ಯಂತ್ರದ ಬಳಕೆ ಮುಂದುವರಿದರೆ ಪ್ರಜಾಪ್ರಭುತ್ವ ಉಳಿಯದು. ಬಿಜೆಪಿ ಮಾತ್ರ ಅಧಿಕಾರದಲ್ಲಿರಲು ಸಾಧ್ಯ” ಎಂದರು.
ಆಪ್ ಶಾಸಕರು ಇವಿಎಂ ಬಗ್ಗೆ ಪ್ರಸ್ತಾವಿಸುತ್ತಿದ್ದಂತೆಯೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಗುಪ್ತಾ, ಆಪ್ ಸರಕಾರದ ವಿರುದ್ಧದ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದರು. ಸತ್ಯೇಂದ್ರ ಜೈನ್ ಶಾಮೀಲಾಗಿರುವ ವಿವಾದಿತ ಭೂ ವ್ಯವಹಾರದ ಬಗ್ಗೆ ಗುಪ್ತಾ ಪ್ರಶ್ನಿಸಿದ್ದರು. ಗದ್ದಲವನ್ನುಂಟು ಮಾಡಿದ ಬಿಜೆಪಿ ನಾಯಕನಿಗೆ ಸುಮ್ಮನಿರುವಂತೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಅವರು ಪದೇಪದೆ ಸೂಚಿಸಿದರೂ ಸುಮ್ಮನಾಗದ ಗುಪ್ತಾ ಅವರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿ, ಸದನದಿಂದ ಹೊರ ಹಾಕಲಾಗಿದೆ.