ಅಲಿಘಡ: ಶಾಲಾಬಾಲಕಿಗೆ ಗುಂಡೇಟು
.jpg)
ಅಲಿಘಡ,ಮೇ 9: ಇಲ್ಲಿಯ ಸಿವಿಲ್ ಲೈನ್ಸ್ ಪ್ರದೇಶದ ಸಂಚಾರ ನಿಬಿಡ ರಸ್ತೆಯಲ್ಲಿ ವ್ಯಕ್ತಿಯೋರ್ವ ಕಾರೊಂದರತ್ತ ಹಾರಿಸಿದ್ದ ಗುಂಡು ತಗುಲಿ ಅಲಿಘಡ ಮುಸ್ಲಿಂ ವಿವಿ (ಅಮು) ಬಾಲಕಿಯರ ಶಾಲೆಯ 13ರ ಹರೆಯದ ವಿದ್ಯಾರ್ಥಿನಿಯೋರ್ವಳು ತೀವ್ರವಾಗಿ ಗಾಯಗೊಂಡಿದ್ದಾಳೆ. ಜೆ.ಎನ್.ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುವ ಬಾಲಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಘಟನೆ ಸಂಭವಿಸಿದಾಗ ಸಮೀಪದಲ್ಲಿಯೇ ಇದ್ದ ಜನರು ಎಚ್ಚೆತ್ತುಕೊಳ್ಳುವ ಮುನ್ನವೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ಐದನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಅನಾಂ ಅಸ್ಲಮ್ ಸೋಮವಾರ ಶಾಲೆಯಿಂದ ಮನೆಗೆ ಮರಳುತ್ತಿದ್ದಳು. ಈ ವೇಳೆ ರಸ್ತೆಯ ಇನ್ನೊಂದು ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಪಿಸ್ತೂಲಿನಿಂದ ಕಾರಿನತ್ತ ಗುಂಡು ಹಾರಿಸಿದ್ದ. ಆದರೆ ಗುಂಡು ಕಾರಿಗೆ ಬೀಳುವ ಬದಲು ಬಾಲಕಿಗೆ ತಾಗಿತ್ತು.
ಲಭ್ಯ ಸುಳಿವುಗಳ ಆಧಾರದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯತ್ತಿದೆ. ಶೀಘ್ರವೇ ಬಂಧಿಸುತ್ತೇವೆ ಎಂದು ಎಸ್‌ಪಿ ಅತುಲ್ ಶ್ರೀವಾಸ್ತವ ಅವರು ಆಶಯ ವ್ಯಕ್ತಪಡಿಸಿದ್ದಾರೆ.