ಗುಂಡ್ಲುಪೇಟೆಯ ಹಂಗಳ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ

ಹಂಗಳ ಗ್ರಾಮದಲ್ಲಿ ನೀರಿಗಾಗಿ ಪರಿತಪಿಸುತ್ತಿರುವ ದೃಶ್ಯ
ಗುಂಡ್ಲುಪೇಟೆ,ಮೇ 9: ಕಾಡಾ ಅಧ್ಯಕ್ಷರು ಮತ್ತು ತಾ.ಪಂ.ಅಧ್ಯಕ್ಷರ ಸ್ವಗ್ರಾಮ ಹಂಗಳ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು ಕುಡಿಯುವ ನೀರಿಗಾಗಿ ಚರಂಡಿ ಸಮೀಪ ಹೊಡೆದುಹೋದ ಪೈಪಿನಲ್ಲಿ ಚರಂಡಿ ನೀರನ್ನು ಬಳಕೆ ಮಾಡುತ್ತಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ತಾಲೂಕಿನಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯುಳ್ಳ ಮತ್ತು ದೇಶದಲ್ಲಿಯೇ ಪ್ರಥಮ ಜಿ.ಪಿ.1 ಗ್ರಾ.ಪಂ. ಹಾಗೂ ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದಿರುವ ಹಾಗೂ ಪ್ರಶಸ್ತಿಗಳಲ್ಲಿ ಪ್ರಥಮ ಸ್ಥಾನ ನೀರು ನೀಡುವುದರಲ್ಲಿ ಕೊನೆಯ ಸ್ಥಾನದಲ್ಲಿರುವ ಹಂಗಳ ಮಾದರಿ ಗ್ರಾಮ ಪಂಚಾಯತ್ ನಲ್ಲಿ ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಬಹುತೇಕ ಬೀದಿಗಳಲ್ಲಿ ನೀರಿನ ಸಮಸ್ಯೆಯಾಗಿದ್ದು ಪ್ರತಿನಿತ್ಯ ಜನರು ನೀರಿಗಾಗಿಪರಿತಪಿಸಬೇಕಾದ ಅನಿವಾರ್ಯತೆ ಉಂಟಾಗಿದೆ.ಗುಂಡ್ಲುಪೇಟೆಯಿಂದ ಆಗಮಿಸುವಾಗ ಮಾರ್ಗಮಧ್ಯದಲ್ಲಿಯೇ ಗ್ರಾಮದ ವಾಲ್ಮೀಕಿ ಬಡಾವಣೆ ಇದ್ದು ಇಲ್ಲಿ ಕುಡಿಯುವ ನೀರು ಸಿಕ್ಕಿ ಬರೋಬ್ಬರಿ 15 ದಿನಗಳಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಇಲ್ಲಿ ಬೆಳಿಗ್ಗೆ ನೀರು ಬರುತ್ತೆ ಎಂದರೆ ರಾತ್ರಿಯೇ ಕಾಯಬೇಕಾದ ಸಂದಿಗ್ದ ಸ್ಥಿತಿ ಜನರಿಗೆ ಬಂದಿದೆ. ಆದರೆ ಇಲ್ಲಿ ನೀರು ಸಿಕ್ಕಿ 15 ದಿನವಾಗಿದೆ!
ಮಂಗಳವಾರ ಬೆಳಿಗ್ಗೆ ಮಹಿಳೆಯರು ಸೇರಿದಂತೆ ಕೂಲಿಕಾರ್ಮಿಕರು, ವೃದ್ದರು ನೀರಿಗಾಗಿ ಸಾಲುಗಟ್ಟಿ ನಿಂತಿದ್ದರು ಆದರೆ ನೀರು ಬಾರಲಿಲ್ಲ ಇದರಿಂದ ಸಾಲುಸಾಲು ಹೆಚ್ಚಾಯ್ತು ನೀರಿನ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ. ಅಷ್ಟರಲ್ಲಿ ನೀರು ಬಂತಾದರೂ ನೀರಿನ ಪೈಪು ಹೊಡೆದಿತ್ತು. ನೀರಿಗಾಗಿ ಕಾದಿದ್ದ ಮಹಿಳೆಯರು ರಾಷ್ಟೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಗಮನಿಸಿದೆ ರಸ್ತೆ ದಾಟಿ ನೀರು ಹಿಡಿಯಲು ಮುಂದಾದರು. ಆದರೆ ಚರಂಡಿ ಪಕ್ಕ ಇರುವ ನೀರಿನ ಪೈಪು ಹೊಡೆದ ಪರಿಣಾಮ ನೀರು ಚರಂಡಿ ಪಕ್ಕ ರಸ್ತೆಯಲ್ಲಿ ಹರಿಯತೊಡಗಿತು.
15 ದಿನದಿಂದ ನೀರಿಗಾಗಿ ಕಾದು ಸುಸ್ತಾದ ಜನರು ರಸ್ತೆಯಲ್ಲಿಯೆ ಚರಂಡಿ ನೀರಿನ ಜೊತೆ ಹರಿಯುತ್ತಿದ್ದ ಕಲುಷಿತ ನೀರನ್ನು ಸಂಗ್ರಹಿಸತೊಡಗಿದರು. ಇದರಿಂದ ಸಾರ್ವಜನಿಕರು ಸರ್ಕಾರ ಮತ್ತು ಜನಪ್ರತಿನಿಧಿಗಳನ್ನ ಶಪಿಸುತ್ತಾ ನೀರಿಗಾಗಿ ಸಾಲುಗಟ್ಟಿದರು.
ತಾ.ಪಂ.ಅಧ್ಯಕ್ಷ ಎಚ್.ಎನ್.ನಟೇಶ್ ಮತ್ತು ಇವರ ತಂದೆ ಕಾಡಾಅಧ್ಯಕ್ಷರಾದ ಎಚ್.ಎಸ್.ನಂಜಪ್ಪ ಸ್ವಗ್ರಾಮ ಹಂಗಳ ಗ್ರಾಮವಾಗಿದ್ದು ಅಧಿಕಾರ ಪಡೆದಿರುವ ಅಧ್ಯಕ್ಷರ ಗ್ರಾಮದಲ್ಲಿಯೇ ಈ ಪರಿಸ್ಥಿತಿ ನಿರ್ಮಾಣವಾದರೆ ಉಳಿದ ಗ್ರಾಮಗಳಲ್ಲಿನ ಜನರ ಸ್ಥಿತಿ ಹೇಗೆ ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಲೈಟ್ಕಂಬದಲ್ಲಿಯೇ ನೀರಿನ ಪೈಪು!
ರಾಷ್ಟ್ರೀಯಹೆದ್ದಾರಿ ಸಮೀಪ ಹಾಗೂ ವಾಲ್ಮೀಕಿ ಬೀದಿಯ ಬಳಿ ಕುಡಿಯುವ ನೀರಿನ ಪೈಪು ಇದ್ದು ಪ್ರತಿನಿತ್ಯ ನೀರಿಗಾಗಿ ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ ಲೈಟ್ಕಂಬದ ಬಳಿ ಗ್ರೌಂಡ್ ಆದರೆ ಸಾರ್ವಜನಿರಿಗೆ ಅಪಾಯ ತಪ್ಪಿದ್ದಲ್ಲ ಹಾಗಾಗಿ ಗ್ರಾ.ಪಂ.ಆಡಳಿತವು ನೀರು ಸರಬರಾಜು ಮಾಡುವುದರ ಜೊತೆಗೆ ಎಚ್ಚರಿಕೆವಹಿಸುವುದು ಸೂಕ್ತ.
ಹಂಗಳ ಗ್ರಾಮದ ಮಾರ್ಗದಲ್ಲಿರಾಷ್ಟ್ರೀಯಹೆದ್ದಾರಿ ಕಾಮಗಾರಿಯು ನಡೆಯುತ್ತಿದ್ದು ಪೈಪ್ಲೈನ್ ಹೊಡೆದಿರುತ್ತದೆ ಹಾಗಾಗಿ ನೀರಿನ ಸಮಸ್ಯೆ ಉಂಟಾಗಿದೆ. ಅಲ್ಲದೆ ಈ ಗ್ರಾಮದಲ್ಲಿ ಬಹುತೇಕ ಅಂತರ್ಜಲ ಕುಸಿತ ಉಂಟಾಗಿದ್ದು ಎಲ್ಲೆ ಬೋರ್ಕೊರೆಸಿದರೂ ಕೂಡ ನೀರು ಸಿಗುತ್ತಿಲ್ಲ. ಹಿರಿಕೆರೆಯಲ್ಲಿ ಬೋರ್ವೆಲ್ ಕೊರೆಸಲು ತೀರ್ಮಾನಿಸಿದ್ದು ನೀರು ಸಿಕ್ಕರೆ ಬಹುತೇಕ ಸಮಸ್ಯೆ ನೀಗುತ್ತದೆ.
- ಪಿಡಿಓ ಕುಮಾರಸ್ವಾಮಿ ಹಂಗಳ ಗ್ರಾ.ಪಂ.







