ಬುದ್ದಿಮಾಂದ್ಯಳ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ 12 ವರ್ಷ ಕಾರಾಗೃಹ ಶಿಕ್ಷೆ

ಮಡಿಕೇರಿ, ಮೇ 9 : ಬುದ್ಧಿಮಾಂದ್ಯ ಯುವತಿಯೊಬ್ಬಳೊಂದಿಗೆ ಸಲುಗೆ ಬೆಳೆಸಿ ಆಕೆಯ ಮೇಲೆ ಆಗಿಂದಾಗ್ಗೆ ಅತ್ಯಾಚಾರ ನಡೆಸಿ ಆಕೆ ಗರ್ಭವತಿಯಾಗಲು ಕಾರಣನಾದ ಆರೋಪಿಗೆ ನ್ಯಾಯಾಲಯ 12 ವರ್ಷ ಕಠಿಣ ಕಾರಾಗೃಹ ವಾಸ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಅತ್ಯಾಚಾರದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರದ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಡಿಕೇರಿ ತಾಲೂಕು ಕೋರಂಗಾಲ ನಿವಾಸಿ ಬಳ್ಳಡ್ಕ ಗುರುರಾಜ್ ಅಲಿಯಾಸ್ ಕುಂಞ ಎಂಬಾತನಿಗೆ ಕಠಿಣ ಶಿಕ್ಷೆ ವಿಧಿಸಿದೆ.
ಕೋರಂಗಾಲ ಗ್ರಾಮದ ಬುದ್ಧಿಮಾಂದ್ಯಳಾಗಿದ್ದ ಯುವತಿಯೊಂದಿಗೆ ಸಖ್ಯ ಬೆಳೆಸಿದ ಗುರುರಾಜ್ ಆಕೆ ಗರ್ಭವತಿಯಾಗಲು ಕಾರಣನಾಗಿದ್ದ ಎಂದು ಆರೋಪಿಸಲಾಗಿತ್ತು. 2013ರ ಜೂ.28ರಂದು ಯುವತಿ ಹೊಟ್ಟೆನೋವಿಗೆ ಒಳಗಾದ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಆರೋಪಿಯ ದುಷ್ಕೃತ್ಯ ಬೆಳಕಿಗೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಲ್ಲಿಸಿದ ದೋಷಾರೋಪಣಾ ಪಟ್ಟಿಯ ವಿಚಾರಣೆ ನಡೆಸಿದ 3ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಪವನೇಶ್ ಅವರು, ಆರೋಪಿಯು ನಡೆಸಿರುವ ದುಷ್ಕೃತ್ಯ ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿಯು ಮಾನಸಿಕ ಅಸ್ವಸ್ಥಳಾಗಿ ನೊಂದಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಕ್ಕಾಗಿ 12 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ 35 ಸಾವಿರ ರೂ. ದಂಡ, ಈ ದುಷ್ಕೃತ್ಯವನ್ನು ಆಗಿಂದಾಗ್ಗೆ ಪುನರಾವರ್ತನೆ ಮಾಡಿದ ಅಪರಾಧಕ್ಕಾಗಿ 10 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು 20 ಸಾವಿರ ರೂ. ದಂಡ ವಿಧಿಸಲಾಗಿದೆ. ಅಲ್ಲದೆ ಪಾವತಿಯಾಗುವ ದಂಡದ ಹಣದಲ್ಲಿ 50 ಸಾವಿರ ರೂ.ಗಳನ್ನು ನೊಂದ ಯುವತಿಗೆ ಪರಿಹಾರವಾಗಿ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದಲ್ಲಿ ಸರಕಾರದ ಪರ ಸರಕಾರಿ ಅಭಿಯೋಜಕ ಕೆ.ನಾಗರಾಜ ಆಚಾರ್ ಅವರು ವಾದಿಸಿದರು.







