ತಮಿಳುನಾಡು ಸಚಿವ ನಿಕಟವರ್ತಿ ಕಂಟ್ರಾಕ್ಟರ್ ನಿಗೂಢ ಸಾವು

ಚೆನ್ನೈ,ಮೇ9: ತಮಿಳುನಾಡಿನ ಹಾಲಿ ಸಚಿವರೊಬ್ಬರ ನಿಕಟವರ್ತಿ ವಿಜಯ್‌ಕುಮಾರ್ ಅವರ ನಿಕಟವರ್ತಿಯೆನ್ನಲಾದ ಸರಕಾರಿ ಗುತ್ತಿಗೆದಾರ ಸುಬ್ರಮಣಿ ಎಂಬವರು ನಿಗೂಢ ಸನ್ನಿವೇಶಗಳಲ್ಲಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಚೆನ್ನೈನಲ್ಲಿ ಎಪ್ರಿಲ್ 8ರಂದು ಆರೋಗ್ಯ ಸಚಿವ ವಿಜಯ್ ಭಾಸ್ಕರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸರಕಾರಿ ಗುತ್ತಿಗೆದಾರ ಸುಬ್ರಮಣಿ ಅವರ ನಿವಾಸದ ಮೇಲೂ ದಾಳಿ ಮಾಡಿದ್ದರು. ಆರೋಗ್ಯ ಇಲಾಖೆಯಲ್ಲಿ ನಡೆದ ಭಾರೀ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿ ವಿಜಯ್‌ಭಾಸ್ಕರ್ ನಿವಾಸದಲ್ಲಿ ದೊರೆತ ದಾಖಲೆ ಪತ್ರಗಳ ಆಧಾರದಲ್ಲಿ ಆದಾಯ ತೆರಿಗೆ ಆಧಿಕಾರಿಗಳು ಎರಡು ಬಾರಿ ವಿಚಾರಣೆಗೆ ಕರೆಸಿಕೊಂಡಿದ್ದರು.
ಸುಬ್ರಮಣಿ ಅವರು ಸೋಮವಾರ ತನ್ನ 10 ಎಕರೆ ವಿಸ್ತೀರ್ಣದ ತೋಟದ ಮನೆಗೆ ತೆರಳಿದ್ದರು. ಅಲ್ಲಿ ಅವರು ಸ್ವಲ್ಪ ಸಮಯದಚಿವರೆಗೆ ನಿದ್ರಿಸುವುದಾಗಿ ಮೇಲ್ವಿಚಾರಕನಿಗೆ ತಿಳಿಸಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮೇಲ್ವಿಚಾರಕನು ಅವರನ್ನು ಎಬ್ಬಿಸಲು ಬಂದಾಗ, ಅವರು ಪ್ರಜ್ಞೆ ತಪ್ಪಿಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಆಗಲೇ ಮೃತಪಟ್ಟಿದ್ದರು. ಸುಬ್ರಮಣಿ ಅವರು ಇಲಿವಿಷ ಸೇವಿಸಿ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸುಬ್ರಮಣಿ ಅವರು ಬಹಳ ಸಮಯದಿಂದ ವಿಜಯ್ ಭಾಸ್ಕರ್ ಅವರ ನಿಕಟವರ್ತಿಯಾಗಿದ್ದರು. ಎಡಿಎಂಕೆ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸುಬ್ರಮಣಿ ಅವರು ಸರಕಾರಿ ವೈದ್ಯಕೀಯ ಗುತ್ತಿಗೆಗಳನ್ನು ಪಡೆದುಕೊಂಡಿದ್ದರು. ಆದರೆ ಇತ್ತೀಚಿನ ದಾಳಿಗಳ ಬಳಿಕ ಅವರು ಖಿನ್ನರಾಗಿದ್ದರೆನ್ನಲಾಗಿದೆ.
ಆದಾಗ್ಯೂ ಸುಬ್ರಮಣಿ ಅವರ ಹೊಲದ ಮನೆಯ ಮಲಗುವ ಕೊಠಡಿಯಲ್ಲಿ ಇಲಿವಿಷದ ಬಾಟಲಿ ಅಥವಾ ಡಬ್ಬ ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.