ಎಚ್‌ಐವಿ ಪೀಡಿತೆಗೆ 3 ಲಕ್ಷ ಪರಿಹಾರಕ್ಕೆ ಬಿಹಾರ ಸರಕಾರಕ್ಕೆ ಸುಪ್ರೀಂ ಆದೇಶ
ಗರ್ಭಪಾತಕ್ಕೆ ಅನುಮತಿ ನಿರಾಕರಣೆ

ಹೊಸದಿಲ್ಲಿ,ಮೇ 9: ಗರ್ಭಪಾತಕ್ಕೆ ತನಗೆ ಅನುಮತಿ ನೀಡಬೇಕೆಂಬ ಎಚ್‌ಐವಿ ಪೀಡಿತ ಅತ್ಯಾಚಾರ ಸಂತ್ರಸ್ತೆಯ ಮನವಿಯನ್ನು ತಿರಸ್ಕರಿಸಿದ್ದಕ್ಕಾಗಿ 3 ಲಕ್ಷ ರೂ. ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಮಂಗಳವಾರ ಬಿಹಾರ ಸರಕಾರಕ್ಕೆ ಆದೇಶಿಸಿದೆ.
ಭಾರತದಲ್ಲಿ ತಾಯಿಯ ಜೀವಕ್ಕೆ ಅಪಾಯವಿರುವ ಸಂದರ್ಭಗಳನ್ನು ಹೊರತುಪಡಿಸಿ, ಗರ್ಭಿಣಿಗೆ 20 ವಾರಗಳೊಳಗೆ ಗರ್ಭಪಾತ ಮಾಡಿಕೊಳ್ಳುವುದಕ್ಕೆ ಕಾನೂನು ಮಿತಿ ವಿಧಿಸಿದೆ. ಗರ್ಭಪಾತಕ್ಕೆ ಅವಕಾಶ ನೀಡುವ ಅವಧಿಯನ್ನು 24 ವಾರಗಳವರೆಗೆ ವಿಸ್ತರಿಸುವುದಕ್ಕೆ ಅನುಮತಿ ನೀಡುವ ನೂತನ ಕರಡು ವಿಧೇಯಕವೊಂದು ಸಿದ್ಧಗೊಂಡಿದ್ದು ಅದು ಇನ್ನಷ್ಟೇ ಸಂಸತ್‌ನಲ್ಲಿ ಮಂಡನೆಯಾಗಬೇಕಿದೆ.
ತಾನು ಎಚ್‌ಐವಿ ಪೀಡಿತೆಯಾಗಿರುವುದರಿಂದ ಗರ್ಭದಲ್ಲಿರುವ ತನ್ನ ಮಗುವಿಗೂ ಆ ಮಾರಣಾಂತಿಕ ಕಾಯಿಲೆಯ ಸೋಂಕು ತಗಲುವ ಅಪಾಯವಿದ್ದು, ಅದಕ್ಕಾಗಿ ತನಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಬೇಕೆಂದು 35 ವರ್ಷದ ಅನಾಥ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈಗ 26 ತಿಂಗಳ ಗರ್ಭಿಣಿಯಾದ ಯುವತಿಯು ಗರ್ಭಪಾತ ಮಾಡಿಸಿಕೊಂಡಲ್ಲಿ ಆಕೆಗೆ ಜೀವಕ್ಕೆ ಅಪಾಯವಿದೆಯೆಂದು ನ್ಯಾಯಾಲಯ ನೇಮಿತಿ ಏಮ್ಸ್ ಆಸ್ಪತ್ರೆಯ ಸಮಿತಿಯೊಂದು ಸಲಹೆ ನೀಡಿದೆ.
ಆದರೆ ಗರ್ಭದಲ್ಲಿರುವ ಭ್ರೂಣಕ್ಕೆ ಈ ಎಚ್‌ಐವಿ ಸೋಂಕು ತಗಲುವುದನ್ನು ತಡೆಯುವಂತಹ ಚಿಕಿತ್ಸಾ ಕ್ರಮವೊಂದನ್ನು ರೂಪಿಸುವಂತೆ ನ್ಯಾಯಮೂರ್ತಿ ದೀಪಕ್‌ಮಿಶ್ರಾ ನೇತೃತ್ವದ ನ್ಯಾಯಪೀಠವು ತಿಳಿಸಿದೆ. ಮಹಿಳೆಯು ನೆಲೆಸಿರುವ ಬಿಹಾರದ ಪಾಟ್ನಾದಲಿರುವ ಇಂದಿರಾಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರಿಂದ ಆಕೆಗೆ ಚಿಕಿತ್ಸೆ ನೀಡುವಂತೆಯೂ ಅದು ಸೂಚನೆ ನೀಡಿದೆ.
ನ್ಯಾಯಾಲವು ಆಗಸ್ಟ್ 9ರಂದು ಪ್ರಕರಣದ ಮುಂದಿನ ಆಲಿಕೆಯನ್ನು ನಡೆಸಲಿದ್ದು, ನಿರ್ಲಕ್ಷದ ಕಾರಣಕ್ಕಾಗಿ ಬಿಹಾರ ಸರಕಾರವು ಮಹಿಳೆಗೆ ನೀಡಬೇಕಾದ ಒಟ್ಟು ಪರಿಹಾರದ ಮೊತ್ತವನ್ನು ನಿರ್ಧರಿಸಲಿದೆ.
ಯುವತಿಯು 17 ವಾರಗಳ ಗರ್ಭಿಣಿಯಾಗಿದ್ದಾಗಲೇ ಗರ್ಭಪಾತ ಮಾಡುವಂತೆ ಸರಕಾರಿ ಆಸ್ಪತ್ರೆಯ ವೈದ್ಯರಿಗೆ ವಿನಂತಿಸಿದ್ದ್ಲಳು. ಆದಾಗ್ಯೂ ಆಸ್ಪತ್ರೆಯು ಆಕೆಯ ತಂದೆ ಈ ಬಗ್ಗೆ ಅನುಮತಿ ನೀಡುವಂತೆ ಸೂಚಿಸಿತ್ತು. ತಂದೆಯ ಸಮ್ಮತಿಯ ಬಳಿಕವೂ ಆಸ್ಪತ್ರೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಮಹಿಳೆ ಪಾಟ್ನಾ ಹೈಕೋರ್ಟ್‌ನ ಮೆಟ್ಟಲೇರಿದ್ದಳು. ಆಗ ಆಕೆ 21 ವಾರಗಳ ಗರ್ಭಿಣಿಯಾಗಿದ್ದಳು.ಯುವತಿಯ ಗರ್ಭಪಾತಕ್ಕೆ ಅನುಮತಿ ನೀಡುವ ಬಗ್ಗೆ ಸಲಹೆ ಕೋರಿ ಪಾಟ್ನಾ ಹೈಕೋರ್ಟ್ ನೇಮಿಸಿದ ಸಮಿತಿಯು,ಆಕೆ ಸ್ವಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥಳಾಗಿರುವುದಾಗಿ ತಿಳಿಸಿತ್ತು. ಆದರೆ ಸಮಿತಿಯು ಗರ್ಭಪಾತಕ್ಕೆ ಅನುಮತಿ ನೀಡಬೇಕೇ ಎಂಬ ಬಗ್ಗೆ ಸ್ಪಷ್ಟವಾದ ಅಭಿಪ್ರಾಯವನ್ನು ತಿಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಗರ್ಭಪಾತದಿಂದ ಅರ್ಜಿದಾರಳ ಜೀವಕ್ಕೆ ಅಪಾಯವಿದೆಯೆಂದು ಭಾವಿಸಿ ಪಾಟ್ನಾ ಹೈಕೋರ್ಟ್ ಗರ್ಭಪಾತಕ್ಕೆ ಅನುಮತಿ ನೀಡಿರಲಿಲ್ಲ ಎಂದು ಆಕೆಯ ವಕೀಲೆ ವೃಂದಾ ಗ್ರೋವರ್ ತಿಳಿಸಿದ್ದಾರೆ.
ಮಹಿಳೆಯು 17 ವಾರಗಳ ಗರ್ಭಿಣಿಯಾಗಿದ್ದಾಗಲೇ ಗರ್ಭಪಾತಕ್ಕೆ ಅನುಮತಿ ಕೋರಿದ್ದಳು. ಆದರೆ ಬಿಹಾರ ಸರಕಾರದ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಅದಕ್ಕೆ ಉತ್ತರಿಸುವಲ್ಲಿ ವಿಳಂಬಿಸಿದ್ದರೆಂದು ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ವಿವಾಹ ವಿಚ್ಛೇದಿತಳಾದ ಈ ಯುವತಿಯು ತನಗೆ ಗರ್ಭಪಾತಕ್ಕೆ ಅವಕಾಶ ನೀಡದ ಪಾಟ್ನಾ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಳು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೇ 3ರಂದು ಮಹಿಳೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲು ಸಮಿತಿಯೊಂದನ್ನು ರಚಿಸುವಂತೆ ಏಮ್ಸ್‌ಗೆ ಸೂಚಿಸಿತ್ತು. ಪಾಟ್ನಾದ ಅನಾಥಾಶ್ರಮವೊಂದರಲ್ಲಿ ವಾಸವಾಗಿದ್ದ ಆ ಮಹಿಳೆಯನ್ನು ಆನಂತರ ಹೊಸದಿಲ್ಲಿಗೆ ಕರೆತರಲಾಗಿತ್ತು.