ಕರಾವಳಿಯಲ್ಲಿ ತೆಂಗಿನ ತೋಟಗಳಿಗೆ ಮಾರಕವಾದ ಕಪ್ಪು ತಲೆಹುಳ ;ಉಳ್ಳಾಲ ಪರಿಸರದಲ್ಲಿ ಅಪಾರ ಹಾನಿ.....

ಮಂಗಳೂರು.ಮೆ.9:ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪ್ರದೇಶಗಳಲ್ಲಿ ತೆಂಗಿನ ತೋಟಗಳಿಗೆ ಮಾರಕವಾಗುವ ಕಪ್ಪು ತಲೆ ಹುಳದಿಂದ ತೆಂಗು ಬೆಳೆಗೆ ಅಪಾರ ಹಾನಿಯಾಗಿದೆ.ಜನವರಿ ತಿಂಗಳಿನಿಂದ ನೇತ್ರಾವತಿ ಸೇತುವೆಯ ಮಗ್ಗುಲಲ್ಲಿ ರುವ ಪ್ರದೇಶಗಳಲ್ಲಿ ಕಾಣಿಸಿಕೊಂಡ ಕಪ್ಪು ತಲೆ ಹುಳದ ಹಾವಳಿ ಸದ್ಯ ಮಾಸ್ತಿಕಟ್ಟೆ, ಕಲ್ಲಾಪು, ಆಡಂಕುದ್ರು ,ತೊಕ್ಕೊಟ್ಟು ತಲಪಾಡಿ ಮೊದಲಾದ ಪ್ರದೇಶಗಳಲ್ಲಿ ವ್ಯಾಪಿಸಿದೆ.
ಕಳೆದ ಐದು ತಿಂಗಳಲ್ಲಿ ತೆಂಗಿನ ಎಲೆಯನ್ನು ತಿನ್ನುವ ಕಪ್ಪು ತಲೆ ಹುಳ (ಒಪಿಸಿನಾ ಅರೆ ನೊಸೆಲ್ಲಾ )ಕೀಟ ತೆಂಗಿನ ಗರಿಯ ತಳಭಾಗದಲ್ಲಿ ಸೇರಿಕೊಂಡು ಹಸುರಿನ ಭಾಗವನ್ನು ಸಂಪೂರ್ಣವಾಗಿ ಹೀರಿ ಬಿಡುತ್ತದೆ.ಇದರಿಂದ ತೆಂಗಿನ ತೋಟಗಳಿಗೆ ಬೆಂಕಿಯಿಂದ ಸುಟ್ಟ ರೀತಿಯಲ್ಲಿ ಕಂಡು ಬರುತ್ತವೆ.ಉಳ್ಳಾಲ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 66 ಪಕ್ಕದಲ್ಲಿ ಕೇರಳದ ಗಡಿ ಭಾಗದವರೆಗೂ ಈ ಕಪ್ಪು ಹುಳದ ಹಾವಳಿಯಿಂದ ತೆಂಗಿನ ತೋಟಗಳಿಗೆ ಅಪಾರ ಹಾನಿಯಾಗಿದೆ.
ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಪ್ರಕಾರ ಸಾಮಾನ್ಯವಾಗಿ ಬೇಸಗೆಯಲ್ಲಿ ಈ ಕಪ್ಪು ತಲೆ ಹುಳ ತೆಂಗಿನ ತೋಟಗಳಿಗೆ ಹಾನಿ ಮಾಡುತ್ತದೆ.ಅದೇ ರೀತಿ ಉಳ್ಳಾಲ ಪರಿಸರದಲ್ಲಿ ಜನವರಿ ತಿಂಗಳಿನಿಂದ ಕಂಡು ಬಂದಿದೆ.ಈ ಕೀಟವನ್ನು ನಿಯಂತ್ರಿಸಲು ಹಾನಿ ಗೀಡಾದ ಗರಿಗಳನ್ನು ತೆಗೆದು ಸುಡಬೇಕು.ತೆಂಗಿನ ಮರಕ್ಕೆ ಹಾನಿ ಮಾಡುವ ಕಪ್ಪು ತಲೆ ಹುಳ ನಿಯಂತ್ರಿಸುವ ಪರೋಪ ಜೀವಿ ಬ್ರಾಕೋನ್ ಬ್ರೆವಿ ಕೋರ್ನಿಸ್ ಮತ್ತು ಗೋನಿಯೋಜಸ್ ನೆಫಾಂಟಿಡಿಸ್ ನ್ನು ಪ್ರತಿ 10ರಿಂದ 15ರಂತೆ 15 ದಿನಗಳಿಗೊಮ್ಮೆ ಕನಿಷ್ಠ ನಾಲ್ಕು ಬಾರಿ ಬಿಡಬೇಕು.ಮಣ್ಣಿನಲ್ಲಿ ಸೂಕ್ತವಾಗಿ ನೀರಿನ ನಿರ್ವಹಣೆ ಮಾಡಬೇಕು.
ನೀರಿನ ತೇವಾಂಶ ಕಾಪಾಡಲು ಸಾವಯವ ಹೊದಿಕೆ ಅಳವಡಿಸಬೇಕು,ಪ್ರತಿ ವರ್ಷ ಸಾವಯವ ಗೊಬ್ಬರ ಬೇವಿನ ಹಿಂಡಿ 5 ಕೆ.ಜಿ ಯಂತೆ ಪ್ರತಿ ಮರದ ಬುಡಕ್ಕೆ ಹಾಕಬೇಕು.ಸಾರಜನಕ,ರಂಜಕ,ಪೋಟ್ಯಾಶ್,ಟ್ರೈಕೋಡರ್ಮಾ ತೆಂಗಿನ ಮರಗಳಿಗೆ ದೊರಕುವಂತೆ ನೋಡಿಕೊಳ್ಳಬೇಕು,ಸಾವಯವ ಜೀವ ರಾಶಿ ಮರುಬಳಕೆಯನ್ನು ,ಹಸಿರು ಬೆಳೆಗಳಾದ ಅಲಸಂಡೆ,ಸನ್‌ಹೆಂಪ್ ಗಿಡಗಳನ್ನು ತೆಂಗಿನ ಮರದ ಬುಡದಲ್ಲಿ ಬೆಳೆಸಬೇಕು ಇದರಿಂದ ಈ ಕೀಟಗಳ ಹಾವಳಿಯನ್ನು ನಿಯಂತ್ರಿಸಬಹುದು ಎಂದು ರೈತರಿಗೆ ಸಲಹೆ ನೀಡುತ್ತಿದ್ದಾರೆ.ಕಾಸರಗೋಡು ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಈ ಹುಳುವಿನ ಹಾವಳಿ ಈಗ ಜಿಲ್ಲೆಯನ್ನು ಪ್ರವೇಶಿದೆ ಎಂದು ತೋಟಗಾರಿಕಾ ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.
‘‘ಉಳ್ಳಾಲ ಪರಿಸರದಲ್ಲಿ ಕಪ್ಪು ತಲೆ ಹುಳದ ಹಾವಳಿಯಿಂದ ಕೆಲವು ತೆಂಗಿ ಮರಗಳು ಸಂಪೂರ್ಣ ಹಾನಿ ಗೀಡಾಗಿವೆ,ಇನ್ನು ಕೆಲವು ತೋಟಗಳಿಗೆ ಭಾಗಶ: ಹಾನಿಯಾಗಿದೆ ಎತ್ತರದ ತೆಂಗಿನ ಮರಗಳ ತಲೆಗಳಿಗೆ ಈ ಕೀಟ ಭಾದೆ ಕಾಣಿಸಿಕೊಂಡಾಗ ಹಾನಿಗೀಡಾದ ಗರಿಗಳನ್ನು ತೆಗೆದು ಸುಡುವುದು ಕಷ್ಟ ಇದರಿಂದ ನಮ್ಮ ಪರಿಸರದಲ್ಲಿ ಕೆಲವು ತೆಂಗಿನ ಮರಗಳನ್ನು ಕಳೆದು ಕೊಂಡಿದ್ದೇವೆ.ನಮ್ಮ ಬದುಕಿಗೆ ಆಧಾರವಗಿರುವ ಕೆಲವು ತೆಂಗಿನ ಮರಗಳು ಸಾಯುವ ಸ್ಥಿತಿಗೆ ತಲುಪಿರುವುದನ್ನು ಕಂಡು ಅಸಾಯಕ ಸ್ಥಿತಿಯಲ್ಲಿದ್ದೇವೆ ಸರಕಾರದಿಂದಾದರೂ ನಮ್ಮ ತೆಂಗಿನ ತೋಟ ಉಳಿಸಲು ನೆರವು ದೊರೆಯಬಹುದೋ ಎನ್ನುವ ನಿರೀಕ್ಷೆಯಲ್ಲಿದ್ದೇವೆ ’’ ಎಂದು ಕಲ್ಲಾಪು ,ಉಳ್ಳಾಲ ಪ್ರದೇಶದ ತೆಂಗು ಬೆಳೆಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.







