ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಉಝ್ಮ ವಾಪಸ್ : ಪಾಕ್ ವಿದೇಶ ಕಚೇರಿ

ಇಸ್ಲಾಮಾಬಾದ್, ಮೇ 9: ತನ್ನನ್ನು ಬಂದೂಕು ತೋರಿಸಿ ಪಾಕಿಸ್ತಾನಿ ವ್ಯಕ್ತಿಯ ಜೊತೆ ಮದುವೆ ಮಾಡಲಾಗಿದೆ ಎಂದು ಹೇಳುತ್ತಿರುವ ಭಾರತೀಯ ಮಹಿಳೆಯನ್ನು ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕವಷ್ಟೇ ಭಾರತಕ್ಕೆ ಕಳುಹಿಸಲಾಗುವುದು ಎಂದು ಪಾಕಿಸ್ತಾನದ ವಿದೇಶ ಕಚೇರಿ ಮಂಗಳವಾರ ಹೇಳಿದೆ.
ತನ್ನನ್ನು ಉಝ್ಮ ಎಂದಷ್ಟೆ ಗುರುತಿಸಿಕೊಂಡಿರುವ ಭಾರತೀಯ ಮಹಿಳೆ ಪ್ರಸಕ್ತ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿದ್ದಾರೆ.
ಉಝ್ಮರ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ ಹಾಗೂ ಕಾನೂನು ಅವಶ್ಯಕತೆಗಳು ಪೂರ್ಣಗೊಂಡ ಬಳಿಕವಷ್ಟೆ ಅವರಿಗೆ ಭಾರತಕ್ಕೆ ಮರಳಲು ಸಾಧ್ಯವಾಗುತ್ತದೆ ಎಂದು ವಿದೇಶ ಕಚೇರಿಯ ವಕ್ತಾರ ನಫೀಸ್ ಝಕಾರಿಯ ‘ಡಾನ್ ನ್ಯೂಸ್’ ಚಾನೆಲ್‌ಗೆ ಹೇಳಿದರು.
ಖೈಬರ್-ಪಖ್ತೂಂಖ್ವ ಪ್ರಾಂತದ ನಿವಾಸಿ ತಾಹಿರ್ ಖಾನ್ ಜೊತೆಗೆ ನಡೆದ ಉಝ್ಮಾರ ಮದುವೆಗೆ ಸಂಬಂಧಿಸಿದ ವಿವರಗಳನ್ನು ನೀಡುವಂತೆ ಭಾರತೀಯ ವಿದೇಶ ವ್ಯವಹಾರಗಳ ಸಚಿವಾಲಯ ಪಾಕಿಸ್ತಾನಿ ವಿದೇಶ ಕಚೇರಿಯನ್ನು ಕೋರಿದೆ ಎಂದು ಝಕಾರಿಯ ತಿಳಿಸಿದರು.
ಇಪ್ಪತ್ತು ವರ್ಷದ ಉಝ್ಮ ಸೋಮವಾರ ಇಸ್ಲಾಮಾಬಾದ್‌ನಲ್ಲಿರುವ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ‘‘ನಾನು ನನ್ನ ಇಚ್ಛೆಯ ಮೇರೆಗೆ ತಾಯ್ನೆಲಕ್ಕೆ ಮರಳಲು ಬಯಸುತ್ತೇನೆ’’ ಎಂದು ಹೇಳಿದ್ದರು.
‘‘ನಾನು ಸಂಪೂರ್ಣ ಭದ್ರತೆಯೊಂದಿಗೆ ನನ್ನ ಮನೆಗೆ ಮರಳಲು ಇಚ್ಛಿಸುತ್ತೇನೆ’’ ಎಂದು ಅವರು ಅರ್ಜಿಯಲ್ಲಿ ಹೇಳಿದ್ದರು.
‘‘ದಿಲ್ಲಿಯಲ್ಲಿರುವ ನನ್ನ ಮನೆಗೆ ಮರಳುವ ಮುನ್ನ ಭಾರತೀಯ ರಾಯಭಾರ ಕಚೇರಿಯಿಂದ ಹೊರಗೆ ಹೋಗಲು ನಾನು ಬಯಸುವುದಿಲ್ಲ’’ ಎಂದಿದ್ದರು.
ಅವರ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಜುಲೈ 11ಕ್ಕೆ ನಿಗದಿಪಡಿಸಿದೆ.
ತಾಹಿರ್ ಖಾನ್‌ಗೆ ಈಗಾಗಲೇ ಮದುವೆಯಾಗಿದ್ದು ನಾಲ್ಕು ಮಕ್ಕಳಿದ್ದಾರೆ ಎನ್ನುವ ವಿಷಯ ಗೊತ್ತಾದ ಬಳಿಕ ಉಝ್ಮಾ ಕಳೆದ ವಾರ ಭಾರತೀಯ ರಾಯಭಾರ ಕಚೇರಿಯಲ್ಲಿ ಆಶ್ರಯ ಕೋರಿದ್ದರು.
ತಾಹಿರ್ ಬಂದೂಕು ತೋರಿಸಿ ನಿಖಾ ನಾಮಕ್ಕೆ ಸಹಿ ಹಾಕಲು ಬಲವಂತಪಡಿಸಿದ್ದನು ಎಂದು ಸೋಮವಾರ ನಡೆದ ವಿಚಾರಣೆಯ ವೇಳೆ ಉಝ್ಮೆ ನ್ಯಾಯಾಲಯದಲ್ಲಿ ಹೇಳಿದರು. ತಾಹಿರ್ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಾನೆ ಹಾಗೂ ಹಿಂಸೆ ನೀಡಿದ್ದಾನೆ ಎಂಬುದಾಗಿಯೂ ಆರೋಪಿಸಿದ ಅವರು, ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಆರೋಪಿಸಿದರು.
ಕಳೆದ ವರ್ಷ ಮಲೇಶ್ಯದಲ್ಲಿ ಉಝ್ಮಗೆ ಖಾನ್ ಪರಿಚಯವಾಗಿತ್ತು.
ಪಾಕಿಸ್ತಾನಿ ವೀಸಾ ಪಡೆದು ವಾಘಾ ಗಡಿ ದಾಟಿದ ತನಗೆ ತಾಹಿರ್ ನಿದ್ದೆ ಗುಳಿಗೆ ತಿನ್ನಿಸಿ ಅಪಹರಿಸಿ ತನ್ನನ್ನು ಬಲವಂತವಾಗಿ ಮದುವೆಯಾಗಿದ್ದಾನೆ ಎಂದು ಉಝ್ಮಾ ಆರೋಪಿಸಿದ್ದಾರೆ.







