ಡಿವೈಎಫ್‌ಐನಿಂದ 14, 15ರಂದು ಮುಸ್ಲಿಂ ಯುವ ಸಮಾವೇಶ
ನೋವು-ನಲಿವುಗಳ ಕುರಿತು ಚರ್ಚೆ, ಸಂವಾದ

ಮಂಗಳೂರು, ಮೇ 9: ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಮೇ14, 15ರಂದು ಮಂಗಳೂರಿನ ಬಲ್ಮಠದ ಶಾಂತಿನಿಲಯದಲ್ಲಿ ಮುಸ್ಲಿಂ ಯುವ ಸಮಾವೇಶ ನಡೆಯಲಿದೆ.
ನಗರ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಅವಮಾನಿತ ಸಮುದಾಯದ ನೋವು, ಸಮುದಾಯದ ಸಮಸ್ಯೆಗಳು ಹಾಗೂ ಪರಿಹಾರದ ಮೇಲೆ ಬೆಳಕು ಚೆಲ್ಲುವ ಗೋಷ್ಠಿಗಳು ಮತ್ತು ಸಂವಾದ ನಡೆಯಲಿವೆ ಎಂದರು. ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ರಿಯಾಝ್ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಪ್ರೊ. ಮಝಫರ್ ಅಸ್ಸಾದಿ, ಸಾಹಿತಿ ಭಾನು ಮುಷ್ತಾಕ್, ಪ್ರೊ. ರಹ್ಮತ್ ತರೀಕೆರೆ, ರಂಜಾನ್ ದರ್ಗಾ, ಮಾಜಿ ಸಚಿವ ಬಿ.ಎ. ಮೊದಿನ್, ದಿನೇಶ್ ಅಮೀನ್‌ಮಟ್ಟು, ಜಿ.ವಿ. ಶ್ರೀರಾಮರೆಡ್ಡಿ, ‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಸಹಿತ ರಾಜ್ಯದ ಮುಸ್ಲಿಂ ಸಮುದಾಯದ ಹಾಗೂ ಇತರ ಬರಹಗಾರರು, ಚಿಂತಕರು, ಸಾಹಿತಿಗಳು ಎರಡು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ಸಮುದಾಯದ ನಿಜ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು.
ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.15ರಷ್ಟಿರುವ ಮುಸ್ಲಿಂ ಸಮುದಾಯ ಇಂದು ಸಂಕಟಕ್ಕೆ ಗುರಿಯಾಗಿದೆ. ಸಮುದಾಯದ ಒಳಗೆ, ಹೊರಗೆ ಎರಡೂ ಕಡೆಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಆರ್ಥಿಕ ಸ್ಥಿತಿಗತಿಗಳಲ್ಲಿ ಮುಸ್ಲಿಮರು ದಲಿತ ಸಮುದಾಯಕ್ಕಿಂತಲೂ ಹಿಂದುಳಿದಿದ್ದಾರೆ ಎಂದು ಜಸ್ಟಿಸ್ ಸಾಚಾರ್ ಸಮಿತಿಯು ತನ್ನ ವರದಿಯಲ್ಲಿ ಬೊಟ್ಟು ಮಾಡಿದೆ. ಸಾಮಾಜಿಕ ತಾರತಮ್ಯದಿಂದ ನರಳುತ್ತಿರುವ ಮುಸ್ಲಿಮರು ಸರಕಾರಗಳ ಅನಾದಾರಕ್ಕೆ ಗುರಿಯಾಗಿದ್ದಾರೆ.
ಮುಸ್ಲಿಮರು ವಾಸಿಸುವ ಬಹುತೇಕ ಪ್ರದೇಶಗಳು ಕೊಳಗೇರಿಯಂತಾಗಿದೆ. ಸ್ಥಳೀಯ ಆಡಳಿತಗಳು ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ ತೋರಿಸಿದೆ. ಕೇಂದ್ರ ರಾಜ್ಯ ಸರಕಾರಗಳ ಬಜೆಟ್‌ಗಳಲ್ಲಿ ಮುಸ್ಲಿಮರನ್ನು ನಿರ್ಲಕ್ಷಿಸಲಾಗುತ್ತಿದೆ. ಒಂದೆಡೆ ವ್ಯವಸ್ಥೆಯ ನಿರ್ಲಕ್ಷಕ್ಕೊಳಗಾಗಿ ಹಸಿವು, ಬಡತನದಿಂದ ನರಳುತ್ತಿರುವ ಮುಸ್ಲಿಮರು ಇನ್ನೊಂದೆಡೆ ಹೆಚ್ಚುತ್ತಿರುವ ಕೋಮುವಾದದ ಬಲಿಪಶುಗಳಾಗಿದ್ದಾರೆ. ದೇಶದಲ್ಲಿ ಮುಸ್ಲಿಮರನ್ನು ಅವಮಾನಿತ, ಅನುಮಾನಿತ ಸಮುದಾಯವಾಗಿ ನಿರೂಪಿಸಿದೆ. ಇಂಥ ಷಮ ಸ್ಥಿತಿಯಲ್ಲಿ ಸಮುದಾಯದ ಸವಾಲುಗಳ ಮೇಲೆ ಬೆಳಕು ಚೆಲ್ಲಬೇಕು; ನೋವು ನಲಿವುಗಳ ವಾಸ್ತವಗಳನ್ನು ಸಮಾಜದ ಮುಂದಿಡಬೇಕು. ಸಮುದಾಯದ ಬಗೆಗಿನ ಪೂರ್ವಾಗ್ರಹಗಳನ್ನು ಸಂಶಯಗಳನ್ನು ದೂರೀಕರಿಸಲು ಯತ್ನಿಸಬೇಕು
. ಮುಸ್ಲಿಂ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬುವ, ರಾಜಕೀಯ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ತಮ್ಮ ನ್ಯಾಯಯುತ ಪಾಲನ್ನು ಪಡೆಯುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಯಬೇಕು ಎಂಬ ಆಶಯದೊಂದಿಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಎರಡು ದಿನಗಳ ‘ಮುಸ್ಲಿಂ ಯುವ ಸಮಾವೇಶ’ ಹಮ್ಮಿಕೊಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಉಪಾಧ್ಯಕ್ಷರು ಬಿ.ಕೆ ಇಮ್ತಿಯಾಜ್, ಜೊತೆ ಕಾರ್ಯದರ್ಶಿ ರಫೀಕ್ ಹರೇಕಳ, ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಾದಿಕ್ ಕಣ್ಣೂರು ಉಪಸ್ಥಿತರಿದ್ದರು.







