ಸ್ವದೇಶಕ್ಕೆ ವಾಪಸಾದ ಎಬಿ ಡಿವಿಲಿಯರ್ಸ್
ಬೆಂಗಳೂರು, ಮೇ 9: ಈ ವರ್ಷದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ಸ್ಟಾರ್ ಬ್ಯಾಟ್ಸ್‌ಮನ್ ಎಬಿಡಿ ವಿಲಿಯರ್ಸ್ ಕೇವಲ 216 ರನ್ ಗಳಿಸಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಇದೀಗ ಒಂದು ಪಂದ್ಯ ಆಡಲು ಬಾಕಿ ಇರುವಾಗಲೇ ತಮ್ಮ ದೇಶಕ್ಕೆ ವಾಪಸಾಗಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಕೂಡ ಹಲವು ಸಂದರ್ಭದಲ್ಲಿ ತಂಡವನ್ನು ಸಮಸ್ಯೆಯಿಂದ ಪಾರಾಗಿಸಲು ವಿಫಲರಾಗಿದ್ದರು. ವೆಸ್ಟ್‌ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ 8 ಪಂದ್ಯಗಳಲ್ಲಿ ಕೇವಲ 152 ರನ್ ಗಳಿಸಿದ್ದರು.
ಈ ವರ್ಷದ ಐಪಿಎಲ್‌ಗೆ ಗುಡ್‌ಬೈ ಹೇಳುತ್ತಿರುವೆ ಎಂದು ಸೋಮವಾರ ಟ್ವೀಟ್ ಮಾಡಿರುವ ಎಬಿಡಿವಿಲಿಯರ್ಸ್ ದಕ್ಷಿಣ ಆಫ್ರಿಕಕ್ಕೆ ವಾಪಸಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಕುಟುಂಬ ಸದಸ್ಯರೊಂದಿಗೆ ಕೆಲವು ಸಮಯ ಕಳೆಯುವುದಾಗಿ ಹೇಳಿದ್ದಾರೆ.
ಆರ್‌ಸಿಬಿಗೆ ಇನ್ನು ಒಂದು ಪಂದ್ಯ ಆಡಲು ಬಾಕಿಯಿದೆ. ಆ ಪಂದ್ಯದಲ್ಲಿ ಡಿವಿಲಿಯರ್ಸ್ ಆಡುತ್ತಿಲ್ಲ. ಆರ್‌ಸಿಬಿ ಈವರೆಗೆ ಆಡಿರುವ 13 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಜಯ ಸಾಧಿಸಿದೆ. ಒಟ್ಟು 5 ಅಂಕ ಗಳಿಸಿರುವ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
2017ರ ಐಪಿಎಲ್ ನಮಗೆಲ್ಲರಿಗೂ ಅತ್ಯಂತ ಬೇಸರವುಂಟು ಮಾಡಿದೆ. ಈ ವೈಫಲ್ಯದಿಂದ ಮುಂದಿನ ವರ್ಷ ನಾವು ಕೆಲವು ಕಠಿಣ ಪಾಠ ಕಲಿಯಬೇಕಾಗಿದೆ. ಜೂನ್‌ನಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೂ ಮೊದಲು ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಎಬಿಡಿವಿಲಿಯರ್ಸ್ ಟ್ವೀಟ್ ಮಾಡಿದ್ದಾರೆ.







