ಪುಣೆ: ನಯನಾ ಪೂಜಾರಿ ಅತ್ಯಾಚಾರ, ಕೊಲೆ ಪ್ರಕರಣ; ಮೂವರಿಗೆ ಗಲ್ಲು

ಪುಣೆ,ಮೇ 9: ಎಂಟು ವರ್ಷಗಳ ಹಿಂದೆ ನಗರದಲ್ಲಿ ನಡೆದ ಸಾಫ್ಟ್‌ವೇರ್ ಎಂಜಿನಿಯರ ನಯನಾ ಪೂಜಾರಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮೂವರು ದೋಷಿಗಳಿಗೆ ಸ್ಥಳೀಯ ನ್ಯಾಯಾಲಯವು ಮಂಗಳವಾರ ಮರಣದಂಡನೆ ಘೋಷಿಸಿದೆ. 2009ರ ಅಕ್ಟೋಬರ್ 7ರಂದು ಮನೆಗೆ ವಾಪಸಾಗುತ್ತಿದ್ದ ನಯನಾ ಅವರನ್ನು ಅಪಹರಿಸಿ, ಅತ್ಯಾಚಾರಗೈದು ಆನಂತರ ಆಕೆಯನ್ನು ಬರ್ಬರವಾಗಿ ಹತ್ಯೆಗೈದ ಆರೋಪದಲ್ಲಿ ಯೋಗೇಶ್ ರಾವತ್, ಮಹೇಶ್ ಠಾಕೂರ್ ಹಾಗೂ ವಿಶ್ವಾಸ್ ಕದಂ ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿತ್ತು.
ಪ್ರಕರಣದ ನಾಲ್ಕನೆ ಆರೋಪಿ ಮಾಫಿ ಸಾಕ್ಷಿಯಾದ ಹಿನ್ನೆಲೆಯಲ್ಲಿ ಆತನನ್ನು ದೋಷಮುಕ್ತಗೊಳಿಸಲಾಗಿತ್ತು.
ಮಾಹಿತಂತ್ರಜ್ಞಾನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅನಿತಾ ಅವರು ಪುಣೆಯ ಕರಾಡಿ ಬೈಪಾಸ್ ಎಂಬಲ್ಲಿ ಟ್ಯಾಕ್ಸಿಗಾಗಿ ಕಾಯುತ್ತಿದ್ದಾಗ ಅವರನ್ನು ಅಪಹರಿಸಲಾಗಿತ್ತು. ಆನಂತರ ಎರಡು ದಿನಗಳ ಬಳಿಕ ಅವರ ಮೃತದೇಹವು ಸಮೀಪದ ಅರಣ್ಯದಲ್ಲಿ ಪತ್ತೆಯಾಗಿತ್ತು. ಅನಿತಾ ಅವರನ್ನು ಕಾರಿನಲ್ಲೇ ಅತ್ಯಾಚಾರಗೈದ ದುಷ್ಕರ್ಮಿಗಳು, ಆಕೆಯಲ್ಲಿದ್ದ ನಗದು ಹಣವನ್ನು ದೋಚಿದ್ದರು. ಆನಂತರ ಆಕೆಯನ್ನು ಕತ್ತುಹಿಸುಕಿ ಕೊಂದಿದ್ದರು ಮತ್ತು ಶವದ ಗುರುತುಸಿಗದಂತೆ ಮಾಡಲು ತಲೆಯನ್ನು ಜಜ್ಜಿ ವಿರೂಪಗೊಳಿಸಲಾಗಿತ್ತೆಂದು ಪ್ರಾಸಿಕ್ಯೂಶನ್ ಆರೋಪಿಸಿತ್ತು.
ವಿಚಾರಣೆಯ ವೇಳೆ ಪ್ರಕರಣದ ಮುಖ್ಯ ಆರೋಪಿ ಯೋಗೇಶ್ ರಾವತ್ ,ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಪರಾರಿಯಾಗಿದ್ದನು. ಆನತರ ಅತನನ್ನು 20 ತಿಂಗಳುಗಳ ಬಳಿಕ ಶಿರ್ಡಿಯಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣವು ಅಪರೂಪದಲ್ಲಿ ಅತ್ಯಂತ ಅಪರೂಪದ್ದಾಗಿದ್ದು, ಅಪರಾಧಿಗಳು ಮರಣದಂಡನೆಗೆ ಅರ್ಹರೆಂದು ಪ್ರಾಸಿಕ್ಯೂಶನ್ ವಾದಿಸಿತ್ತು. ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾದ ಸಂದರ್ಭದಲ್ಲಿ ಅನಿತಾ ಅವರ ಪತಿ ಅಭಿಜಿತ್ ಪೂಜಾರಿ, ಸಹೋದರಿ ಮನೀಶಾ ಗಂಬಾವ್ಳೆ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು.
ಮೂರು ವರ್ಷಗಳ ಕಾಲ ನಡೆದ ಈ ಪ್ರಕರಣದ ವಿಚಾರಣೆಯನ್ನು ನಾಲ್ವರು ನ್ಯಾಯಾಧೀಶರು ನಿರ್ವಹಿಸಿದ್ದರು.







