ಕೃಷ್ಣ ಮಠದ ಬ್ರಹ್ಮಕಲಶೋತ್ಸವಕ್ಕೆ ಅನಂತ್, ಉಮಾಭಾರತಿ

ಉಡುಪಿ, ಮೇ 9: ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ತಮ್ಮ ದಾಖಲೆಯ ಐದನೇ ಪರ್ಯಾಯಾವಧಿಯಲ್ಲಿ ಹಮ್ಮಿ ಕೊಂಡ ಶ್ರೀಕೃಷ್ಣ ಮಠದ ಸುತ್ತುಪೌಳಿಯ ನವೀಕರಣಗೊಳಿಸಿ ಶ್ರೀಕೃಷ್ಣನಿಗೆ 1008 ರಜತ ಕಲಶ ಸಹಿತ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಉಮಾಭಾರತಿ, ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ, ಕೃಷ್ಣಪ್ಪ ಹಾಗೂ ಸಂತೋಷ್ ಲಾಡ್ ಮುಂತಾದವರು ಭಾಗವಹಿಸುವುದನ್ನು ಖಚಿತ ಪಡಿಸಿದ್ದಾರೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಶ್ರೀಕೃಷ್ಣ ಮಠದ ಕನಕಮಂಟಪದಲ್ಲಿ ಇಂದು ಹಮ್ಮಿಕೊಳ್ಳಲಾದ ಬ್ರಹ್ಮಕಲಶೋತ್ಸವ ಸಂಬಂಧಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತಿದ್ದರು. ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ವೆುೀ 14ರಿಂದ 18ರವರೆಗೆ ನಡೆಯಲಿದೆ.
ಕೇಂದ್ರ ಗೃಹ ಸಚಿವ ರಾಜಾನಾಥ ಸಿಂಗ್ ಅವರು ಅನಂತಕುಮಾರ್, ಉಮಾಭಾರತಿಯವರೊಂದಿಗೆ ಮೇ 14ರಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಕೇಂದ್ರ ಸಚಿವ ಸದಾನಂದ ಗೌಡ ಅವರು 15ರ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಖರ್ಗೆ, ಲಾಡ್ ಅವರು 18ರಂದು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 16ರಂದು ಉಪಸ್ಥಿತರಿವುದಾಗಿ ತಿಳಿಸಿದ್ದಾರೆ ಎಂದರು.
ಪ್ರತಿದಿನ ಸಂಜೆ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿವೆ. ಅಲ್ಲದೇ ಪ್ರತಿದಿನ ರಾತ್ರಿ 8:00ರಿಂದ ಹಿರಿಯ ಯತಿಗಳ ಉಪಸ್ಥಿತಿಯಲ್ಲಿ ದೇಶದ ಪ್ರಮುಖ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇವುಗಳಲ್ಲಿ ನೃತ್ಯ, ಹಿಂದುಸ್ತಾನಿ, ಕರ್ನಾಟಕ ಸಂಗೀತ ಕಚೇರಿ, ಯಕ್ಷಗಾನ ಹಾಗೂ ಮಹಾರಾಷ್ಟ್ರದ ತಂಡವೊಂದರಿಂದ ವಿಶಿಷ್ಟ ಕಾರ್ಯಕ್ರಮ ‘ಜಾಗೋ ಭಾರತ್’ ಪ್ರದರ್ಶನವಿದೆ ಎಂದು ಕಾರ್ಯಕ್ರಮಗಳ ವಿವರ ನೀಡುತ್ತಾ ವಾಸುದೇವ ಭಟ್ ಪೆರಂಪಳ್ಳಿ ವಿವರಿಸಿದರು.
ನಮ್ಮ ಪರ್ಯಾಯ ಕಾರ್ಯಕ್ರಮಕ್ಕೆ ನೀಡಿದಂತೆ, ಈ ಕಾರ್ಯಕ್ರಮಕ್ಕೂ ಎಲ್ಲರ ಸರ್ವಸಹಕಾರವನ್ನು ಅಪೇಕ್ಷಿಸುತ್ತೇವೆ ಎಂದು ಪೇಜಾವರ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಸಮಾಲೋಚನಾ ಸಭೆಯಲ್ಲಿ ಊರಿನ ಪ್ರಮುಖರಾದ ಭುವನೇಂದ್ರ ಕಿದಿಯೂರು, ಹಿರಿಯಣ್ಣ ಟಿ.ಕಿದಿಯೂರು, ಪ್ರದೀಪ್‌ಕುಮಾರ್ ಕಲ್ಕೂರ, ದಾಮೋದರ ಐತಾಳ್, ಈಶ್ವರ ಚಿತ್ಪಾಡಿ ಮುಂತಾದವರು ಉಪಸ್ಥಿತರಿದ್ದರು.







