ಪೊಲೀಸ್ ಪಹರೆಯಲ್ಲಿ ಗುಡಿಸಲುಗಳ ತೆರವು
ಗೋಮಾಳ ಮಂಜೂರು ಪ್ರಕರಣಕ್ಕೆ ಮತ್ತೊಂದು ತಿರುವು
ಜೆಸಿಬಿ ಮೂಲಕ ಗುಡಿಸಲುಗಳನ್ನು ತೆರವುಗೊಳಿಸಿದ ಜಿಲ್ಲಾಡಳಿತ
ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ
ಶಿವಮೊಗ್ಗ, ಮೇ 9: ಶಿವಮೊಗ್ಗ ತಾಲೂಕಿನ ವೀರಣ್ಣನ ಬೆನವಳ್ಳಿ ಗ್ರಾಮದಲ್ಲಿ ಹಕ್ಕಿಪಿಕ್ಕಿ ಸಮುದಾಯದವರಿಗೆ ನಿವೇಶನ ವಿತರಣೆ ಗಾಗಿ ಜಿಲ್ಲಾಡಳಿತ 4 ಎಕರೆ ಗೋಮಾಳ ಜಾಗ ಮೀಸಲಿಟ್ಟ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೆ, ಈ ಜಾಗದಲ್ಲಿ ಇತ್ತೀಚೆಗೆ ದಿಢೀರ್ ಆಗಿ ತಲೆಎತ್ತಿದ್ದ ನೂರಾರು ಗುಡಿ ಸಲು - ಜೋಪಡಿಗಳನ್ನು ಬಿಗಿ ಪೊಲೀಸ್ ಪಹರೆಯಲ್ಲಿ ಜಿಲ್ಲಾ ಪಂಚಾಯತ್ ಆಡಳಿತ ಮಂಗಳವಾರ ಬೆಳಗ್ಗೆ ತೆರವುಗೊಳಿಸಿತು. ಗುಡಿಸಲು ಹಾಕಿಕೊಂಡಿದ್ದ ಹಕ್ಕಿಪಿಕ್ಕಿ ಸಮುದಾಯ ಹಾಗೂ ಇತರ ವರ್ಗಕ್ಕೆ ಸೇರಿದವರಿದ್ದ ಗುಂಪು, ತೆರವು ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿತು. ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿತು. ನಾವೇ ನಿಜವಾದ ಫಲಾನುಭವಿಗಳಾಗಿದ್ದೇವೆ. ತಮಗೆ ವಾಸಿಸಲು ಬೇರೆಲ್ಲೂ ಸ್ಥಳವಿಲ್ಲ.
ಯಾವುದೇ ಕಾರಣಕ್ಕೂ ಗುಡಿಸಲು ತೆರವುಗೊಳಿಸಬಾರದು ಎಂದು ಪಟ್ಟು ಹಿಡಿಯಿತು. ಆದರೆ, ಇದ್ಯಾವುದಕ್ಕೂ ಸಮ್ಮತಿ ಸೂಚಿಸದ ಅಧಿಕಾರಿಗಳ ತಂಡ, ಪೊಲೀಸರ ಭದ್ರತೆಯೊಂದಿಗೆ ಜೆಸಿಬಿ ಮೂಲಕ ಗುಡಿಸಲು ತೆರವುಗೊಳಿಸಲು ಮುಂದಾಯಿತು. ಎಲ್ಲ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ನಿವಾಸಿಗಳು ಗುಡಿಸಲುಗಳಲ್ಲಿದ್ದ ತಮ್ಮ ಸರಕು-ಸರಂಜಾಮುಗಳನ್ನು ಕೊಂಡೊಯ್ದರು. ತೆರವು ಕಾರ್ಯಾಚರಣೆಯಲ್ಲಿ ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ತಾಲೂಕು ಆಡಳಿತದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಏನೀದು ವಿವಾದ: ವೀರಣ್ಣನ ಬೆನವಳ್ಳಿ ಗ್ರಾಮದ ಸರ್ವೇ ನಂಬರ್ 78 ರಲ್ಲಿ ಸುಮಾರು 89 ಎಕರೆ ಗೋಮಾಳ ಪ್ರದೇಶ ವಿದ್ದು, ಜಾನುವಾರುಗಳ ಮೇವಿಗಾಗಿ ಮೀಸಲಿರಿಸಲಾಗಿತ್ತು. ಇದರಲ್ಲಿ ಹಲವು ಎಕರೆಯಷ್ಟು ಜಾಗವನ್ನು ಕೆಲವರು ಒತ್ತುವರಿ ಮಾಡಿ ಸಾಗುವಳಿ ನಡೆಸುತ್ತಿದ್ದಾರೆ. ಈ ನಡುವೆ ಜಿಲ್ಲಾಡಳಿತವು ಈ ಜಾಗದಲ್ಲಿ 4 ಎಕರೆಯನ್ನು ಹಕ್ಕಿಪಿಕ್ಕಿ ಸಮುದಾಯದವರಿಗೆ ನಿವೇಶನ ಕಲ್ಪಿಸಲು, 9 ಎಕರೆ ಜಾಗವನ್ನು ಸ್ಥಳೀಯರ ವಸತಿ ಉದ್ದೇಶಕ್ಕೆ, 20 ಎಕರೆಯಷ್ಟು ಜಾಗ ವನ್ನು ಸರಕಾರಿ ಕಟ್ಟಡಗಳ ನಿರ್ಮಾಣಕ್ಕೆ, 10 ಎಕರೆ ಜಾಗವನ್ನು ಕಂದಾಯ ಇಲಾಖೆಗೆ ಮೀಸಲಿರಿಸಿ ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ಸ್ಥಳೀಯ ಗ್ರಾಮಸ್ಥರು ಡಿ.ಸಿ. ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು, ಗೋಮಾಳ ಪ್ರದೇಶ ವನ್ನು ಜಾನುವಾರುಗಳ ಮೇವಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದ್ದರು.
ಈ ನಡುವೆ ಹಕ್ಕಿಪಿಕ್ಕಿ ಸಮುದಾಯದ ಒಂದು ಗುಂಪು ಹಾಗೂ ಇತರರನ್ನೊಳಗೊಂಡ ಒಂದು ವರ್ಗವು ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾಡಳಿತ ಮಂಜೂರು ಮಾಡಿದ್ದ ಜಾಗ ದಲ್ಲಿ ಜೋಪಡಿ-ಗುಡಿಸಲುಗಳನ್ನು ಹಾಕಿಕೊಂಡಿದ್ದರು. ನಾವೇ ನಿಜವಾದ ಫಲಾನುಭವಿಗಳಾಗಿದ್ದು, ಈ ಹಿನ್ನೆಲೆಯಲ್ಲಿ ಗುಡಿಸಲು ಹಾಕಿಕೊಂಡಿರುವುದಾಗಿ ಹೇಳಿಕೊಂಡಿತ್ತು. ಇನ್ನೊಂದೆಡೆ ಹಕ್ಕಿಪಿಕ್ಕಿ ಸಮುದಾಯದ ಮತ್ತೊಂದು ಗುಂಪು ಡಿಎಸ್‌ಎಸ್ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ನಾವೇ ನಿಜವಾದ ಫಲಾನುಭವಿಗಳಾಗಿದ್ದೇವೆ. ಪ್ರಸ್ತುತ ಹಾಕಿರುವ ಜೋಪಡಿ- ಗುಡಿಸಲುಗಳನ್ನು ತೆರವುಗೊಳಿಸಬೇಕು. ಲೇಔಟ್ ನಿರ್ಮಿಸಿ, ಮೂಲಸೌಕರ್ಯ ಕಲ್ಪಿಸಿ ನಿವೇಶನ ವಿತರಣೆ ಮಾಡಬೇಕು. ಅಲ್ಲಿಯವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಆಗ್ರಹಿಸಿತ್ತು. ಎರಡು ಗುಂಪುಗಳ ಪರ-ವಿರುದ್ಧ ಹೋರಾಟವು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ಪ್ರತಿಭಟನೆ ಸ್ಥಗಿತ
ಮತ್ತೊಂದೆಡೆ ವೀರಣ್ಣನ ಬೆನವಳ್ಳಿಯ ಗೋಮಾಳ ಜಾಗದಲ್ಲಿ ಹಾಕಲಾಗಿದ್ದ ಗುಡಿಸಲುಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಡಿಎಸ್‌ಎಸ್ ಸಂಘಟನೆಯ ನೇತೃತ್ವದಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಹಕ್ಕಿಪಿಕ್ಕಿ ಸಮುದಾಯದ ಮತ್ತೊಂದು ಗುಂಪು, ಜಿಪಂ ಆಡಳಿತ ಗುಡಿಸಲುಗಳನ್ನು ತೆರವುಗೊಳಿಸುತ್ತಿದ್ದಂತೆ ಮಂಗಳವಾರ ಪ್ರತಿಭಟನೆ ಸ್ಥಗಿತಗೊಳಿಸಿದೆ. ಮೂಡಿಗೆರೆ:







