ಗುಜರಾತ್: ಪ್ರಧಾನಿ ಸೋದರನ ನೇತೃತ್ವದಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲಕರ ತೀವ್ರ ಹೋರಾಟ

ಅಹ್ಮದಾಬಾದ್,ಮೇ 9: ಹೆಚ್ಚಿನ ಕಮಿಷನ್ ನೀಡಬೇಕೆಂಬ ತಮ್ಮ ಬೇಡಿಕೆಯನ್ನು ಗುಜರಾತ್ ಸರಕಾರವು ಒಪ್ಪಿಕೊಳ್ಳದಿದ್ದರೆ ರಾಜ್ಯದಲ್ಲಿಯ ಎಲ್ಲ ನ್ಯಾಯಬೆಲೆ ಅಂಗಡಿಗಳ ಮಾಲಿಕರು ಮೇ 28ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಹಿರಿಯ ಸೋದರ ಪ್ರಹ್ಲಾದ್ ಮೋದಿ ಅವರು ಬೆದರಿಕೆಯೊಡ್ಡಿದ್ದಾರೆ.
ಸಾಮೂಹಿಕವಾಗಿ ಕಾರ್ಯಭಾರವನ್ನು ಸ್ಥಗಿತಗೊಳಿಸಲು ಮತ್ತು ಅಹಿಂಸಾತ್ಮಕ ಹೋರಾಟವನ್ನು ಆರಂಭಿಸಲು ನಾವು ಚಿಂತನೆ ನಡೆಸುತ್ತಿದ್ದೇವೆ ಎಂದು ಗುಜರಾತ್ ರಾಜ್ಯ ನ್ಯಾಯಬೆಲೆ ಅಂಗಡಿಗಳು ಮತ್ತು ಸೀಮೆಎಣ್ಣೆ ಪರವಾನಿಗೆದಾರರ ಸಂಘದ ಅಧ್ಯಕ್ಷರಾಗಿರುವ ಪ್ರಹ್ಲಾದ್ ಮೋದಿಯವರು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಪ್ರಧಾನ ಕಾರ್ಯದರ್ಶಿ ಸಂಗೀತಾ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದ ಪ್ರತಿಯನ್ನು ಮುಖ್ಯಮಂತ್ರಿ ವಿಜಯ ರುಪಾನಿ, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಮತ್ತು ಮುಖ್ಯ ಕಾರ್ಯದರ್ಶಿ ಜೆ.ಎನ್.ಸಿಂಗ್‌ಅವರಿಗೂ ರವಾನಿಸಲಾಗಿದೆ.
ಎಷ್ಟು ಸಮಯದವರೆಗೆ ಮುಷ್ಕರವನ್ನು ಮುಂದುವರಿಸುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರಹ್ಲಾದ್ ಮೋದಿಯವರು,ಅವರು (ಗುಜರಾತ್ ಸರಕಾರ) ನಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳದಿದ್ದರೆ ಜೀವಮಾನ ಪರ್ಯಂತ ಮುಷ್ಕರ ಮುಂದುವರಿಯುತ್ತದೆ ಎಂದು ಉತ್ತರಿಸಿದರು.
ಗುಜರಾತ್ ಸುಮಾರು 1.2 ಕೋಟಿ ನೋಂದಾಯಿತ ಪಡಿತರ ಚೀಟಿದಾರರನ್ನು ಹೊಂದಿದೆ. ಬಿಪಿಎಲ್ ಮತ್ತು ಅಂತ್ಯೋದಯ ಯೋಜನೆಗಳ ಫಲಾನುಭವಿಗಳೂ ಇದರಲ್ಲಿ ಸೇರಿದ್ದಾರೆ. ಒಟ್ಟೂ ಚೀಟಿದಾರರಲ್ಲಿ 65 ಲಕ್ಷ ಚೀಟಿದಾರರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಗೆ ಸೇರಿದ್ದು, 55 ಲಕ್ಷ ಚೀಟಿಗಳನ್ನು ಅಸಿಂಧು ಎಂದು ಘೋಷಿಸಲಾಗಿದೆ. ಈ ಪಡಿತರ ಚೀಟಿದಾರರಿಗೆ ರಾಜ್ಯಾದ್ಯಂತ ಸುಮಾರು 900 ನ್ಯಾಯಬೆಲೆ ಅಂಗಡಿಗಳು ಪಡಿತರ ಸಾಮಗ್ರಿಗಳನ್ನು ಪೂರೈಸುತ್ತಿವೆ.
ನ್ಯಾಯಬೆಲೆ ಅಂಗಡಿಕಾರರಿಗೆ ಕಮಿಷನ್ ಹೆಚ್ಚಳಕ್ಕೆ ನೆರವಾಗಲು ಸರಕಾರವು ಸಲಹೆಗಳನ್ನು ಕೋರುತ್ತಿದೆ, ಆದರೆ ಕಮಿಷನ್ ಹೇಗೆ ಹೆಚ್ಚಿಸಬಹುದು ಎನ್ನುವುದನ್ನು ಕಂಡುಕೊಳ್ಳುವುದು ಅವರ ಕರ್ತವ್ಯವಾಗಿದೆ ಎಂದು ಪ್ರಹ್ಲಾದ್ ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.
ಮೇ 28ರಿಂದ ನ್ಯಾಯಬೆಲೆ ಅಂಗಡಿಕಾರರು ಮತ್ತು ಸೀಮೆಎಣ್ಣೆ ವಿತರಕರು ಪಡಿತರ ಸಾಮಗ್ರಿಗಳ ಪೂರೈಕೆಯನ್ನು ನಿಲ್ಲಿಸಲಿದ್ದಾರೆ ಮತ್ತು ಇದರಿಂದ ಉಂಟಾಗಬಹುದಾದ ಸ್ಥಿತಿಗೆ ರಾಜ್ಯ ಸರಕಾರವೇ ಹೊಣೆಯಾಗುತ್ತದೆ ಎಂದು ಈ ಮೂಲಕ ಸರಕಾರಕ್ಕೆ ತಿಳಿಸಲು ಬಯಸಿದ್ದೇವೆ ಎಂದು ಪತ್ರವು ಎಚ್ಚರಿಕೆ ನೀಡಿದೆ.







