ಅಲ್ಪಸಂಖ್ಯಾತರ ನಿಗಮದಿಂದ ವಿದ್ಯಾರ್ಥಿಗಳಿಗೆ ಸಾಲ-ಮೇಳ
ಮಂಗಳೂರು, ಮೇ 9: ಪ್ರಸಕ್ತ ವರ್ಷ ಸಿಇಟಿ ಮೂಲಕ ಮೆಡಿಕಲ್-ಇಂಜಿನಿಯರಿಂಗ್ ಸೀಟುಗಳಿಗೆ ಆಯ್ಕೆಯಾಗುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲು ಸಾಲ-ಮೇಳ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ನಿಗಮದ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಹಿಂದೆ ಹಣಕಾಸಿನ ಸಮಸ್ಯೆಯಿಂದಾಗಿ ಅನೇಕರು ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸುತ್ತಿದ್ದಾರೆ. ಸಮಾಜದ ದುರ್ಬಲರನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ರಾಜ್ಯ ಸರಕಾರ ಅನೇಕ ನೆರವು ನೀಡುತ್ತಿದೆ. ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು.
ನಿಗಮದ ಮೂಲಕ ನೀಡುವ ಸಾಲವನ್ನು ಸಮರ್ಪಕವಾಗಿ ಬಳಸಿ, ಕ್ಲಪ್ತ ಸಮಯದಲ್ಲಿ ಸಾಲದ ಕಂತನ್ನು ಮರುಪಾವತಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಗೆ ನೆರವು ನೀಡಲು ಸಾಧ್ಯವಾಗಲಿದೆ ಎಂದವರು ನುಡಿದರು. ನಿಗಮದ ಜಿಲ್ಲಾ ವ್ಯವಸ್ಥಾಪಕ ಮುಹಮ್ಮದ್ ಸಫ್ವಾನ್ ಮಾತನಾಡಿ, ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅರಿವು ಯೋಜನೆಯಡಿ ಸಾಲ ನೀಡಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಿದೆ. ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಈ ಸಾಲ-ಮೇಳ ಕಾರ್ಯಕ್ರಮದಲ್ಲಿ ದಾಖಲಾತಿಗಳ ಪರಿಶೀಲನೆ ನಂತರ ಸ್ಥಳದಲ್ಲೇ ಮಂಜೂರಾತಿ ನೀಡಲಾಗುವುದು ಎಂದರು. ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದ ವ್ಯವಸ್ಥಾಪಕ ಖಾದರ್ ವಿವಿಧ ಶೈಕ್ಷಣಿಕ ನೆರವು ಯೋಜನೆಗಳ ಮಾಹಿತಿ ನೀಡಿದರು.
ಮಂಗಳವಾರ ನಡೆದ ಸಾಲ-ಮೇಳ ಕಾರ್ಯಕ್ರಮದಲ್ಲಿ ಸಿಇಟಿ ಪರೀಕ್ಷೆ ಬರೆದ ಸುಮಾರು 130ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬುಧವಾರ ಮೇಳ ಸಮಾಪನಗೊಳ್ಳಲಿದೆ.