ಕಾಶ್ಮೀರದಲ್ಲಿ ಸೇನಾಧಿಕಾರಿಯೊಬ್ಬರನ್ನು ಅಪಹರಿಸಿ ಹತ್ಯೆ

ಶ್ರೀನಗರ, ಮೇ 10: , ಕುಟುಂಬ ಸಮೇತ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತದ ಯುವ ಸೇನಾಧಿಕಾರಿಯೊಬ್ಬರನ್ನು ಉಗ್ರರು ಅಪಹರಿಸಿ ಗುಂಡಿಟ್ಟು ಕೊಂದಿರುವ ಘಟನೆ ದಕ್ಷಿಣ ಕಾಶ್ಮೀರದ ಕುಲ್ಗಾಂನಲ್ಲಿ ನಡೆದಿದೆ.
ಸೇನಾಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಝ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಉಗ್ರರು ಕಳೆದ ರಾತ್ರಿ ಅಪಹರಿಸಿ ಕೊಂಡಿಟ್ಟು ಕೊಂದಿದ್ದಾರೆ. ಅವರ ಮೃತದೇಹ ಶೋಪಿಯಾನ್ ನಲ್ಲಿ ಇಂದು ಪತ್ತೆಯಾಗಿದೆ.
. ಉಮರ್ ಫಯಾಝ್ ಅವರು ಸಂಬಂಧಿಯ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತ ತೆರಳಿದ್ದರು.ಕಳೆದ ರಾತ್ರಿ 10:30ರ ವೇಳೆಗೆ ಅವರು ಏಕಾಂಗಿಯಾಗಿದ್ದ ಸಂದರ್ಭದಲ್ಲಿ ಉಗ್ರರು ಅವರನ್ನು ಅಪಹರಿಸಿದ್ದಾರೆ. ಬಳಿಕ ಅವರನ್ನು ಗುಂಡಿಟ್ಟು ಕೊಂದು ಶೋಪಿಯಾನ್ ನಲ್ಲಿ ಅವರ ಮೃತದೇಹವನ್ನು ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಡಿಸೆಂಬರ‍್ ನಲ್ಲಿ ಫಯಾಝ್ ಅವರು ಸೇನೆಗೆ ಸೇರಿದ್ದರು.ಆದರೆ ಸೇನೆಗೆ ಸೇರಿ ಆರು ತಿಂಗಳು ಕಳೆಯುವ ಮೊದಲೇ ಅವರು ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಕರ್ತವ್ಯದಲ್ಲಿರದ ಯೋಧರನ್ನು ಉಗ್ರರು ಅಪಹರಿಸಿ ಕೊಲ್ಲುವ ಕೃತ್ಯ ಮುಂದುವರಿದಿದೆ.ಎರಡು ದಿನಗಳ ಹಿಂದೆ ಅನಂತನಾಗ್ ನಲ್ಲಿ ಪೊಲೀಸ್ ಸಿಬಂದಿ ಅಝರ್ ಮೆಹಮೂದ್ ಮತ್ತು ಮೂವರು ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದರು. ಕಳೆದ ವಾರ ಉಗ್ರರು ಬ್ಯಾಂಕ್ ವ್ಯಾನ್ ಮೇಲೆ ದಾಳಿ ನಡೆಸಿ ಐವರು ಪೊಲೀಸರು ಮತ್ತು ಇಬ್ಬರು ಖಾಸಗಿ ಭದ್ರತಾ ಸಿಬಂದಿಗಳನ್ನು ಕೊಂದು 50 ಲಕ್ಷ ರೂ. ಅಪಹರಿಸಿದ್ದರು.