ಮುಂಬೈ ತಲುಪಿದ ಜಸ್ಟಿನ್ ಬೀಬರ್: ಈ ಅಂತಾರಾಷ್ಟ್ರೀಯ ತಾರೆಯನ್ನು ಸ್ವಾಗತಿಸಿದ್ದು ಯಾರು ಗೊತ್ತೇ ?

ಮುಂಬೈ, ಮೇ 10: ಖ್ಯಾತ ಪಾಪ್ ಗಾಯಕ ಕೆನಡಾದ ಜಸ್ಟಿನ್ ಬೀಬರ್ ಬುಧವಾರ ಬೆಳಗ್ಗಿನ ಜಾವ ಸುಮಾರು 1:30ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಅವರು ಇಂದು ಭಾರತದಲ್ಲಿ ತಮ್ಮ ಪ್ರಪ್ರಥಮ ಸಂಗೀತ ಕಾರ್ಯಕ್ರಮವನ್ನು ಮುಂಬೈಯಲ್ಲಿ ನೀಡಲಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಅಂಗರಕ್ಷಕ ಶೇರಾ ಅವರು 23 ವರ್ಷದ ಜಸ್ಟಿನ್ ಬೀಬರ್ ಬೆಂಗಾವಲಿಗೆ ನಿಂತಿದ್ದರು. ನಸುಗುಲಾಬಿ ಬಣ್ಣದ ಪುಲ್ ಓವರ್ ಹಾಗೂ ಕಪ್ಪು ಬರ್ಮುಡಾ ಶಾರ್ಟ್ಸ್ ಧರಿಸಿದ್ದ ಜಸ್ಟಿನ್ ಬೀಬರ್ ದಕ್ಷಿಣ ಮುಂಬೈಯ ವಿಲಾಸಿ ಹೋಟೆಲ್ ಸೈಂಟ್ ರೀಗಸ್ ನಲ್ಲಿ ತಂಗಲಿದ್ದಾರೆ.
ಅವರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸ್ವಲ್ಪವೇ ಹೊತ್ತಿನಲ್ಲಿ ಅವರ ಹಲವು ಫೋಟೋ ಹಾಗೂ ವೀಡಿಯೋಗಳು ಅಂತರ್ಜಾಲದಲ್ಲಿ ಹರಿದಾಡಿದವಲ್ಲದೆ ಅವುಗಳಲ್ಲಿ ಅವರು ಸ್ವಲ್ಪ ಸುಸ್ತಾದವರಂತೆ ಗೋಚರಿಸುತ್ತಿದ್ದರು.
ಜಸ್ಟಿನ್ ಬೀಬರ್ ಅವರು ನಗರದ ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ಸಂಗೀತ ಪ್ರದರ್ಶನ ನೀಡಲಿದ್ದಾರೆ. ದೇಶಾದ್ಯಂತದ ಅವರ ಅಭಿಮಾನಿಗಳು ಈಗಾಗಲೇ ಮುಂಬೈಗೆ ಬಂದಿದ್ದು, ಅವರ ಕಾರ್ಯಕ್ರಮ ನೋಡಲು ಕಾತುರರಾಗಿದ್ದಾರೆ. ಸುಮಾರು 45,000 ಜನರು ಅವರ ಕಾರ್ಯಕ್ರಮ ವೀಕ್ಷಿಸಲಿದ್ದಾರೆಂದು ಅಂದಾಜಿಸಲಾಗಿದೆ.
ಸುಮಾರು 500 ಪೊಲೀಸ್ ಸಿಬ್ಬಂದಿಯ ಹೊರತಾಗಿ ಖಾಸಗಿ ಅಂತಾರಾಷ್ಟ್ರೀಯ ಸೆಕ್ಯುರಿಟಿ ಏಜನ್ಸಿಯೊಂದಕ್ಕೆ ಕಾರ್ಯಕ್ರಮದ ಭದ್ರತಾ ವ್ಯವಸ್ಥೆ ವಹಿಸಲಾಗಿದೆ. ಸಿಸಿಟಿವಿ ಕ್ಯಾಮರಾಗಳಿರುವ ಡ್ರೋನ್ ಗಳೂ ಸಮಾರಂಭದಲ್ಲಿ ಹದ್ದಿನ ಕಣ್ಣಿಡಲಿವೆ.
ಈ ಖ್ಯಾತ ಪಾಪ್ ಸ್ಟಾರ್ ಬ್ಲ್ಯಾಕ್ ಟೈ ಬಾಕ್ಸಿಂಗ್ ಸ್ಪರ್ಧೆಯಲ್ಲೂ ಕಾಣಿಸಿಕೊಳ್ಳುವ ಸಂಭವವಿದ್ದು, ಅಲ್ಲಿ ಬಾಲಿವುಡ್ ನಟರಾದ ಅರ್ಜುನ್ ರಾಮ್ ಪಾಲ್, ಟೈಗರ್ ಶ್ರಾಫ್, ಮಲೈಕಾ ಅರೋರಾ ಹಾಗೂ ಸನ್ನಿ ಲಿಯೋನ್ ಕೂಡ ಭಾಗವಹಿಸಲಿದ್ದಾರೆ.
ಆಟೋಗ್ರಾಫ್ ಮಾಡಲ್ಪಟ್ಟ ಸರೋದ್ ಒಂದನ್ನು ಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರು ಜಸ್ಟಿನ್ ಬೀಬರ್ ಅವರಿಗೆ ನೀಡಲಿದ್ದಾರೆ.
ತಮ್ಮ ಜನಪ್ರಿಯ ಹಾಡುಗಳಾದ ‘ವೇರ್ ಆರ್ ಯೂ ನೌ,’ ‘ಬಾಯ್ ಫ್ರೆಂಡ್,’ ‘ಲವ್ ಯುವರ್ ಸೆಲ್ಫ್,’ ‘ಕಂಪೆನಿ’ ಮೊದಲಾವುಗಳನ್ನು ಹಾಡಿ ಜಸ್ಟಿನ್ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ.
ಗುರುವಾರ ಅವರು ಮುಂಬೈ ಪ್ರವಾಸ ಕೈಗೊಳ್ಳಲಿದ್ದು, ಶುಕ್ರವಾರ ಜೈಪುರ ಹಾಗೂ ಆಗ್ರಾದ ತಾಜ್ ಮಹಲ್ ಗೆ ಭೇಟಿ ನೀಡಲಿದ್ದಾರೆ.