ಮಿತ್ತಬಾಗಿಲು: ನೀರಿಗಾಗಿ ಗ್ರಾ.ಪಂ. ಎದುರು ಧರಣಿ

ಬೆಳ್ತಂಗಡಿ, ಮೇ 10: ಮಿತ್ತಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಲಿ, ಬೊಳ್ಳಾಜೆ, ಶಾಂತಿಗುಡ್ಡೆ, ತಮ್ಮನಬೈಲು ಪ್ರದೇಶಗಳ ಸುಮಾರು 200 ಮನೆಗಳಿಗೆ ಕಳೆದ ಒಂದು ವಾರದಿಂದ ನೀರು ಸರಬರಾಜು ಇಲ್ಲದೆ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಜನರ ಕೂಗನ್ನು ಯಾರೂ ಆಲಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬುಧವಾರ ಮಿತ್ತಬಾಗಿಲು ಗ್ರಾಮ ಪಂಚಾಯತ್ ಕಚೇರಿಯ ಎದುರು ಧರಣಿ ನಡೆಸಿದರು.
ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಬಗ್ಗೆ ಗ್ರಾಮ ಪಂಚಾಯತ್ ಗೆ 2 ದಿನಗಳ ಹಿಂದೆಯೇ ದೂರು ಸಲ್ಲಿಸಿದ್ದು, ಯಾವುದೇ ಸ್ಪಂದನೆ ಕಂಡು ಬಂದಿಲ್ಲ ಆದ್ದರಿಂದ ನೀರಿಗಾಗಿ ಗ್ರಾಮ ಪಂಚಾಯತ್ ಎದುರು ಧರಣಿ ನಡೆಸುವುದಾಗಿ ಅವರು ತಿಳಿಸಿದರು. ಗ್ರಾ. ಪಂ ಕಚೇರಿಯ ಬಾಗಿಲ ಮುಂದೆಯೇ ಕುಳಿತು ನೀರಿನ ಬೇಡಿಕೆಯಿಟ್ಟರು. ಮಧ್ಯಾಹ್ನ ಮೂರು ಗಂಟೆಯವರೆಗೂ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿ ಬಂದಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಧರಣಿಯನ್ನು ಹಿಂಪಡೆಯುವಂತೆ ಸೂಚಿಸಿದ್ದು, ತಮಗೆ ಸರಿಯಾದ ವ್ಯವಸ್ಥೆ ಸಿಗುವವರೆಗೆ ಧರಣಿ ಮುಂದುವರಿಸುವುವದಾಗಿ ಪೊಲೀಸರಿಗೆ ತಿಳಿಸಿದ ಗ್ರಾಮಸ್ಥರು ಇದರಿಂದ ಪೊಲೀಸ್ ಮತ್ತು ಜನರ ನಡುವೆ ವಾಗ್ವಾದ ನಡೆದಿದ್ದು, ನಂತರ ಬೆಳ್ತಂಗಡಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಜನರ ಸಮಸ್ಯೆ ಆಲಿಸಿದರು. ನೀರಿನ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ ಬಳಿಕ ಧರಣಿಯನ್ನು ಹಿತೆಗೆದುಕೊಳ್ಳಲಾಯಿತು. ಧರಣಿಯ ನೇತೃತ್ವವನ್ನು ಸುರೇಂದ್ರ ಕೊಲ್ಲಿ, ಗುರುರಾಜ್ ಕಿಲ್ಲೂರು, ರವಿ ಸುವರ್ಣ, ಪ್ರದೀಪ್ ಹಾಗೂ ಇತರರು ವಹಿಸಿದ್ದರು.