ಬೀದಿಬದಿ ವ್ಯಾಪಾರಸ್ಥರ ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ಧರಣಿ

ಮಂಗಳೂರು, ಮೇ 10: ಬೀದಿಬದಿ ವ್ಯಾಪಾರಸ್ಥರ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಹಾಗೂ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಸಿಐಟಿಯುಗೆ ಸಂಯೋಜಿತಗೊಂಡಿರುವ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಮಂಗಳವಾರ ಮಹಾನಗರ ಪಾಲಿಕೆ ಕಚೇರಿಯೆದುರು ಧರಣಿ ಸತ್ಯಾಗ್ರಹ ನಡೆಯಿತು.
350ಕ್ಕೂ ಮಿಕ್ಕಿದ ಬೀದಿಬದಿ ವ್ಯಾಪಾರಸ್ಥರು ಭಾಗವಹಿಸಿದ್ದ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿದ ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ನಾಗರಿಕ ಸಮಾಜದ ಅವಿಭಾಜ್ಯ ಅಂಗವಾಗಿರುವ ಬೀದಿಬದಿ ವ್ಯಾಪಾರವನ್ನೇ ಇಲ್ಲವಾಗಿಸಲು ಆಳುವ ವರ್ಗಗಳು ಹೊಂಚುಹಾಕುತ್ತಿವೆ. ಕೇಂದ್ರ ಸರಕಾರವು ಮಸೂದೆಯನ್ನು ಅಂಗೀಕರಿಸಿದ್ದರೂ, ಸುಪ್ರೀಂಕೋರ್ಟ್ ಪರ್ಯಾಯ ವ್ಯವಸ್ಥೆಗೆ ತೀರ್ಪು ನೀಡಿದ್ದರೂ, ಸ್ಥಳೀಯಾಡಳಿತಗಳು ಸ್ಪಂದಿಸಬೇಕೆಂದಿದ್ದರೂ ಆಳುವ ವರ್ಗಗಳು ಮಾತ್ರ ಅದ್ಯಾವುದಕ್ಕೂ ಜಗ್ಗದೆ ತಮ್ಮ ವರ್ಗ ತಾಸಕ್ತಿಗಳನ್ನು ಎತ್ತಿ ತೋರಿಸಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೀತಿಗಳು ಶೋಷಿತ ಸಮುದಾಯಕ್ಕೆ ಮುಳ್ಳಾಗಿ ಪರಿಣುಸುತ್ತಿದೆ. ಬೀದಿಬದಿ ವ್ಯಾಪಾರಸ್ಥರು ಗೌರವಯುತ ಬದುಕು ಸಾಗಿಸುವಂತಾಗಲು ನಗರಪಾಲಿಕೆ ಕೂಡಲೇ ಮುಂದಾಗುವ ಮೂಲಕ ಪರ್ಯಾಯ ವ್ಯವಸ್ಥೆಗೆ ಸಹಕರಿಸಬೇಕಾಗಿದೆ ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷರಾದ ಸುನೀಲ್‌ಕುಮಾರ್ ಬಜಾಲ್ ಮಾತನಾಡಿ, ಮಂಗಳೂರು ನಗರದ ಎಲ್ಲಾ ಸಮಸ್ಯೆಗಳಿಗೆ ಬೀದಿಬದಿ ವ್ಯಾಪಾರಸ್ಥರೇ ಕಾರಣ ಎನ್ನುವ ಮೇಯರ್‌ರವರ ಹೇಳಿಕೆ ಬಾಲಿಶತನದಿಂದ ಕೂಡಿದೆ. ನಗರದ ಕೆಲವೇ ರಸ್ತೆಗಳಲ್ಲಿ ಮಾತ್ರವೇ ಬೀದಿಬದಿ ವ್ಯಾಪಾರಸ್ಥರಿದ್ದಾರೆ. ಬಹುತೇಕ ರಸ್ತೆಗಳಲ್ಲಿ ಐಷಾರಾಮಿ ಕಾರುಗಳ ಭರಾಟೆ, ಪಾರ್ಕಿಂಗ್, ಬಹುಮಹಡಿ ಕಟ್ಟಡಗಳ ಅತಿಕ್ರಮಣದಿಂದ ಕೂಡಿದೆ. ಕಾಟಾಚಾರಕ್ಕೆ ನೀಡಿದ ಗುರುತುಚೀಟಿಯ ಅವಧಿ ಮುಗಿದಿದ್ದರೂ, ಇನ್ನೂ ನವೀಕರಿಸಿಲ್ಲ. 2ನೆ ಹಂತದ ಗುರುತು ಚೀಟಿ ನೀಡಿಲ್ಲ. ವೆಂಡಿಂಗ್ ರೆನ್ ರಚಿಸಿದ್ದರೂ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾರೋಪ ಭಾಷಣ ಮಾಡಿದ ಸಿಐಟಿಯು ಜಿಲ್ಲಾ ಮುಖಂಡ ಯೋಗೀಶ್ ಜಪ್ಪಿನಮೊಗರು, ಬಿಲ್ಡರ್ ಮಾಫಿಯಾದ ಕಪಿಮ್ಠುಯಲ್ಲಿರುವ ಕಾಂಗ್ರೆಸ್ ನೇತೃತ್ವದ ಮಂಗಳೂರು ಮಹಾನಗರ ಪಾಲಿಕೆಯು ಜನತೆಯ ಹಣವನ್ನು ಹಾಡುಹಗಲಲ್ಲೇ ದೋಚುತ್ತಿದೆ. ಮತ್ತೊಂದು ಕಡೆ ಬಡಪಾಯಿ ಬೀದಿಬದಿ ವ್ಯಾಪಾರಸ್ಥರ ಮೇಲೆ ದಾಳಿ ನಡೆಸುತ್ತಿದೆ. ಇದರಿಂದಾಗಿ ನಗರಪಾಲಿಕೆ ಯಾರ ಪರವಾಗಿದೆ ಎಂದು ಸಾಬೀತಾಗಿದೆ ಎಂದು ಹೇಳಿದರು.
ಹೋರಾಟದ ನೇತೃತ್ವವನ್ನು ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಆರ್.ಎಸ್. ಇತರ ಪದಾಧಿಕಾರಿಗಳಾದ ಅತಾವುಲ್ಲ, ಮುಹಮ್ಮದ್ ಆಸಿಫ್, ಆದಂ ಬಜಾಲ್, ಹಿತೇಶ್ ಪೂಜಾರಿ, ಅಣ್ಣಯ್ಯ ಕುಲಾಲ್, ನೌಷಾದ್, ಸಿಕಂದರ್, ಹಂಝ, ಮೇರಿ ಡಿಸೋಜ ಮುಂತಾದವರು ವಹಿಸಿದ್ದರು.