ಕಪಿಲ್ ಮಿಶ್ರಾ ಮೇಲೆ ದಾಳಿ ನಡೆಸಿದವನು 'ಬಿಜೆಪಿ ಬೆಂಬಲಿಗ'

ಹೊಸದಿಲ್ಲಿ, ಮೇ 10 : ಮಾಜಿ ಆಪ್ ಸಚಿವ ಕಪಿಲ್ ಮಿಶ್ರಾ ಮೇಲೆ ಬುಧವಾರ ಹಲ್ಲೆ ಮಾಡಿದ ಆರೋಪದಲ್ಲಿ ಬಂಧಿತ ವ್ಯಕ್ತಿ ಬಿಜೆಪಿ ಬೆಂಬಲಿಗ ಎಂದು ಹೇಳಲಾಗಿದೆ. ಅಂಕಿತ್ ಭಾರದ್ವಾಜ್ ಎಂಬ ಈ ವ್ಯಕ್ತಿ ಆಪ್ ಬೆಂಬಲಿಗ ಎಂದು ಈ ಮೊದಲು ಸುದ್ದಿಯಾಗಿತ್ತು. ಆದರೆ ಆತನ ಫೇಸ್ ಬುಕ್ ಪ್ರೊಫೈಲ್ ನಲ್ಲಿರುವ ಮಾಹಿತಿ ಇದಕ್ಕೆ ತದ್ವಿರುದ್ಧವಾಗಿದ್ದು ಅದರ ಸ್ಕ್ರೀನ್ ಶಾಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದರೊಂದಿಗೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಈ ಮೊದಲು ಪಕ್ಷದೊಳಗಿನ ಭ್ರಷ್ಟಾಚಾರ ಬಯಲು ಮಾಡಿದ್ದಕ್ಕೆ ಮಿಶ್ರಾ ಮೇಲೆ ಆಪ್ ಬೆಂಬಲಿಗ ದಾಳಿ ಮಾಡಿದ್ದಾನೆ ಎಂದು ಪ್ರಚಾರ ನಡೆದಿತ್ತು. ಆದರೆ ಈಗ ಆಪ್ ಬೆಂಬಲಿಗರು ಭಾರದ್ವಾಜ್ ಫೇಸ್ ಬುಕ್ ಪ್ರೊಫೈಲ್ ನ ಸ್ಕ್ರೀನ್ ಶಾಟ್ ಶೇರ್ ಮಾಡಿ ಇದು ಬಿಜೆಪಿ ನಡೆಸಿದ ಪೂರ್ವಯೋಜಿತ ಕೃತ್ಯ ಎಂದು ಹೇಳುತ್ತಿದ್ದಾರೆ.

ಆಪ್ ನಿಂದ ವಜಾಗೊಂಡಿರುವ ಮಾಜಿ ಸಚಿವ ಕಪಿಲ್ ಮಿಶ್ರಾ ಬುಧವಾರ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿ ಆಪ್ ಶಾಸಕರು ವಿದೇಶ ಪ್ರವಾಸ ಮಾಡಿರುವ ಕುರಿತ ವಿವರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.





