ಆಚಾರ್ಯ ಮಧ್ವರಿಗೆ ಪ್ರತಿಷ್ಠಾ ಮಹಾ ಬ್ರಹ್ಮಕಲಶಾಭಿಷೇಕ ಸಂಪನ್ನ

ಕುಂಜಾರುಗಿರಿ (ಉಡುಪಿ), ಮೇ 10: ಕುಂಜಾರುಗಿರಿ ಶ್ರೀದುರ್ಗಾದೇವಿ ಬೆಟ್ಟದ ಬುಡದಲ್ಲಿ 40 ಅಡಿ ಎತ್ತರದ ವೇದಿಕೆಯಲ್ಲಿ ನಿರ್ಮಿಸಿದ ಎಂಟು ಅಡಿ ಎತ್ತರದ ಪದ್ಮಪೀಠದ ಮೇಲೆ ಪ್ರತಿಷ್ಠಾಪನೆಗೊಳಿಸಲಾದ 32 ಅಡಿ ಎತ್ತರದ ಶ್ರೀಮಧ್ವಾಚಾರ್ಯರ ಏಕಶಿಲಾ ವಿಗ್ರಹಕ್ಕೆ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಇಂದು ಬೆಳಗ್ಗೆ 8:55ರ ಸುಮುಹೂರ್ತದಲ್ಲಿ ಪ್ರತಿಷ್ಠಾ ಮಹಾ ಬ್ರಹ್ಮಕಲಶೋತ್ಸವವನ್ನು ನೆರವೇರಿಸಲಾಯಿತು.
ಸುಮಾರು ಒಂದು ಗಂಟೆಗಳ ಕಾಲ ನಡೆದ ವಿವಿಧ ಧಾರ್ಮಿಕ ಅನುಷ್ಠಾನ ಗಳೊಂದಿಗೆ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಶ್ರೀಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥ ಶ್ರೀಪಾದರು, ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಉತ್ತರಾಧಿಮಠದ ಶ್ರೀಸತ್ಯಾತ್ಮತೀರ್ಥ ಶ್ರೀಪಾದರು ಉಪಸ್ಥಿತಿಯಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು.
ಮಾಜಿ ಸಚಿವ ಹಾಗೂ ಕಾಪು ಶಾಸಕ ವಿನಯಕುಮಾರ್ ಸೊರಕೆ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕೆ. ರಘುಪತಿ ಭಟ್, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಪ್ರದೀಪ್‌ಕುಮಾರ್ ಕಲ್ಕೂರ್, ಎಂ.ಬಿ.ಪುರಾಣಿಕ್ ಅಲ್ಲದೇ ವಿವಿಧ ಕ್ಷೇತ್ರಗಳ ಧರ್ಮದರ್ಶಿಗಳು, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು