ಮೇ15ರಂದು ‘ಕೌಶಲ್ಯ ಕರ್ನಾಟಕ ಮಿಷನ್’ಗೆ ಚಾಲನೆ
ಉಡುಪಿ, ಮೇ 10: ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯ ನಿವಾರಣೆಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಬಾರಿಯ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಿದ ನಿರುದ್ಯೋಗಿ ಯುವಜನತೆಗೆ ಕೌಶಲ್ಯ ತರಬೇತಿ ನೀಡಿ ಸೂಕ್ತ ಉದ್ಯೋಗ ಪಡೆಯಲು ಅರ್ಹರನ್ನಾಗಿಸುವ ‘ಕೌಶಲ್ಯ ಕರ್ನಾಟಕ ಮಿಷನ್’ ಯೋಜನೆ ಮೇ 15ರಂದು ಉದ್ಘಾಟನೆಗೊಳ್ಳಲಿದೆ.
ಈ ಯೋಜನೆಯನ್ನು ಮೇ 15ರಂದು ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳು ಉದ್ಘಾಟಿಸಿದರೆ, ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಚಿವರು ಹಾಗೂ ತಾಲೂಕು ಮಟ್ಟದಲ್ಲಿ ಶಾಸಕರು ಅದೇ ದಿನ ಉದ್ಘಾಟಿಸುವರು. ಅದರಂತೆ ಉಡುಪಿ ಜಿಲ್ಲೆಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮೇ 15ರಂದು ಬೆಳಗ್ಗೆ 11:00 ಗಂಟೆಗೆ ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ ಕಾರ್ಯಕ್ರಮ ಉದ್ಘಾಟಿಸುವರು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಅಭ್ಯರ್ಥಿಗಳ ಕೋರಿಕೆ ಮತ್ತು ಮಾರುಕಟ್ಟೆಯ ಬೇಡಿಕೆಗಳಿಗನುಗುಣವಾಗಿ ತರಬೇತಿಯನ್ನು ರೂಪಿಸಬೇಕಿದ್ದು, ಇದಕ್ಕಾಗಿ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿಕರಣ ಕಾರ್ಯಕ್ರಮಕ್ಕಾಗಿ ವೆಬ್ ಪೋರ್ಟಲ್ ಒಂದನ್ನು ವಿನ್ಯಾಸಗೊಳಿಸಲಾಗಿದ್ದು (ಕೌಶಲಕಾರ್.ಕಾಮ್) ಇದನ್ನು ಹಾಗೂ ಮೊಬೈಲ್ ಆ್ಯಪ್ ಒಂದರ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ಅಂದು ನೆರವೇರಿಸಲಿದ್ದಾರೆ ಎಂದರು.
ಜಿಲ್ಲಾ ಮಟ್ಟದಲ್ಲಿ ಸಚಿವರು ಹಾಗೂ ತಾಲೂಕು ಮಟ್ಟದಲ್ಲಿ ಶಾಸಕರು ವೆಬ್ ಪೋರ್ಟಲ್‌ಗೆ ಚಾಲನೆ ನೀಡಲಿದ್ದಾರೆ. ಉಡುಪಿಯಲ್ಲಿ ಬೋರ್ಡ್ ಹೈಸ್ಕೂಲ್ ನಲ್ಲಿ, ಕುಂದಾಪುರದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣ ಹಾಗೂ ಕಾರ್ಕಳದಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇದರ ಉದ್ಘಾಟನೆ ನಡೆಯಲಿದೆ ಎಂದು ಪ್ರಿಯಾಂಕ ತಿಳಿಸಿದರು.
ಯೋಜನೆಯಂತೆ ಜಿಲ್ಲೆ ಹಾಗೂ ತಾಲೂಕಿನಲ್ಲಿರುವ 18ರಿಂದ 35 ವರ್ಷ ವಯೋಮಾನದೊಳಗಿನ ಎಲ್ಲಾ ನಿರುದ್ಯೋಗಿ ಯುವಜನತೆಗೆ 10 ದಿನಗಳವ ರೆಗೆ ನೊಂದಣಿ ಶಿಬಿರವನ್ನು ಆಯೋಜಿಸಲಾಗುವುದು. ನೋಂದಣಿ ಶಿಬಿರದ ಬಳಿಕವೂ ನಿರುದ್ಯೋಗಿಗಳು ವೆಬ್ ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ತನ್ನ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು. ಅಲ್ಲದೇ ಸೈಬರ್ ಕೆಫೆ ಹಾಗೂ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಒದಗಿಸುವ ಸೌಕರ್ಯಗಳನ್ನು ಬಳಸಿಕೊಂಡು ಅಭ್ಯರ್ಥಿಗಳು ಕೌಶಲ್ಯ ತರಬೇತಿಗೆ ತಮ್ಮ ಹೆಸರುಗಳನ್ನು ವೆಬ್ ಪೋರ್ಟಲ್‌ಗಳಲ್ಲಿ ನೊಂದಾಯಿಸಿಕೊಳ್ಳಬಹುದು ಎಂದರು.
ಮುಂದೆ ದಿನ ನಿಗದಿ ಪಡಿಸಿದ ಬಳಿಕ ಅಭ್ಯರ್ಥಿಗಳು ತಾವು ಇಚ್ಛಿಸಿದ ವಿಷಯದಲ್ಲಿ ತರಬೇತಿಯನ್ನು ಪಡೆಯಬಹುದಾಗಿದೆ. ತರಬೇತಿ ನೀಡಲು ಒಟ್ಟು 39 ವಿಷಯಗಳನ್ನು ಆಯ್ಕೆ ಮಾಡಲಾಗಿದೆ. ಮೊದಲು ತರಬೇತು ನೀಡುವವರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಿದ ಬಳಿಕ ಅಭ್ಯರ್ಥಿಗಳು ತಾಪು ಇಚ್ಛಿಸಿದ ವಿಷಯಗಳಲ್ಲಿ ಕೌಶಲ್ಯ ತರಬೇತಿ ಪಡೆಯ ಬಹುದು ಎಂದು ಪ್ರಿಯಾಂಕ ವಿವರಿಸಿದರು.
ಬೇಡಿಕೆ ಹಾಗೂ ಕೋರಿಕೆಯ ಸಮೀಕ್ಷೆಯ ಬಳಿಕ ಪ್ರತಿ ಜಿಲ್ಲೆಗೆ ಗುರಿಯನ್ನು ನಿಗದಿಪಡಿಸಲಿದ್ದಾರೆ. ಗುರಿಯ ಮೂರು ಪಟ್ಟು ಜನರನ್ನು ನೊಂದಣಿ ಮಾಡಲಾಗುವುದು. ಇದಕ್ಕಾಗಿ 10 ದಿನಗಳ ನೊಂದಣಿ ಶಿಬಿರವನ್ನು ತಹಶೀಲ್ದಾರ್ ಮುಖಾಂತರ ಆಯೋಜಿಸಲಾಗುವುದು. ತರಬೇತಿಯ ಕಾಲಾವಧಿಯನ್ನು ಮುಂದೆ ನಿರ್ಧರಿಸಾಗುವುದು ಎಂದವರು ಹೇಳಿದರು.







