ಚೆನ್ನೈ ಗೆಸ್ಟ್‌ಹೌಸ್‌ನ ಬಿಲ್ ಪಾವತಿಸದೆ ಅಜ್ಞಾತ ಸ್ಥಳಕ್ಕೆ ತೆರಳಿದ ನ್ಯಾ.ಕರ್ಣನ್

ಹೊಸದಿಲ್ಲಿ, ಮೇ 10: ಸುಪ್ರೀಂಕೋರ್ಟ್‌ನಿಂದ ಜೈಲು ಶಿಕ್ಷೆಗೆ ಒಳಗಾಗಿರುವ ಪ್ರಪ್ರಥಮ ನ್ಯಾಯಾಧೀಶರಾಗಿರುವ ನ್ಯಾ.ಸಿ.ಎಸ್.ಕರ್ಣನ್ ಚೆನ್ನೈಯ ಸರಕಾರಿ ಅತಿಥಿಗೃಹದಿಂದ ಬಿಲ್ ಪಾವತಿಸದೆ ಹೊರಟು ಹೋಗಿದ್ದಾರೆ. ಆದರೆ ಅವರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಸುಪ್ರೀಂಕೋರ್ಟ್ ಶಿಕ್ಷೆ ಘೋಷಿಸುವ ಕೆಲವೇ ಗಂಟೆಗಳ ಮೊದಲು ಕೋಲ್ಕತ್ತಾದಿಂದ ಚೆನ್ನೈಗೆ ಪ್ರಯಾಣಿಸಿದ್ದ ಕರ್ಣನ್ ಇಬ್ಬರು ವಕೀಲರೊಂದಿಗೆ ಚೆನ್ನೈಯಲ್ಲಿರುವ ರಾಜ್ಯ ಸರಕಾರದ ಅತಿಥಿಗೃಹಕ್ಕೆ ತೆರಳಿದ್ದರು. ಬಳಿಕ ವಕೀಲರನ್ನು ಕೋಣೆ ಬಿಟ್ಟು ತೆರಳಲು ಸೂಚಿಸಲಾಗಿತ್ತು. ಕರ್ಣನ್ ಬುಧವಾರ ಆಂಧ್ರಪ್ರದೇಶದ ಪ್ರಸಿದ್ಧ ಕ್ಷೇತ್ರ ಶ್ರೀಕಾಳಹಸ್ತಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ ಬುಧವಾರ ಗೆಸ್ಟ್‌ಹೌಸ್‌ನ ಬಿಲ್ ಕೂಡಾ ಪಾವತಿಸದೆ ಕರ್ಣನ್ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬುಧವಾರ ಸಂಜೆ ಶ್ರೀಕಾಳಹಸ್ತಿ ನಗರಕ್ಕೆ ಆಗಮಿಸಿ ಗುರುವಾರ ಇಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ದೇವಳದ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ನ್ಯಾ.ಕರ್ಣನ್‌ರನ್ನು ತಕ್ಷಣ ಬಂಧಿಸುವಂತೆ ಪ.ಬಂಗಾಲ ಪೊಲೀಸರಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.