ನಮ್ಮ ಸರಕಾರವು ಧರ್ಮದ ಆಧಾರದಲ್ಲಿ ಪೂರ್ವಗ್ರಹಪೀಡಿತವಾಗಿಲ್ಲ: ಪ್ರಧಾನಿ ಮೋದಿ

ಹೊಸದಿಲ್ಲಿ,ಮೇ 10: ತನ್ನ ಸರಕಾರವು ಧರ್ಮ ಅಥವಾ ಜಾತಿಯ ಆಧಾರದಲ್ಲಿ ಪೂರ್ವಗ್ರಹವನ್ನು ಹೊಂದುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ತನ್ನನ್ನು ಭೇಟಿಯಾಗಿದ್ದ ಪ್ರತಿಷ್ಠಿತ ಮುಸ್ಲಿಂ ನಾಯಕರ ನಿಯೋಗಕ್ಕೆ ತಿಳಿಸಿದ್ದಾರೆ.
ಇತ್ತೀಚಿಗೆ ಹಲವಾರು ರಾಜ್ಯಗಳಲ್ಲಿ ಸ್ವಘೋಷಿತ ಗೋರಕ್ಷಕರಿಂದ ಮುಸ್ಲಿಮರ ಮೇಲೆ ಸರಣಿ ದಾಳಿಗಳು ನಡೆದಿರುವ ಹಿನ್ನೆಲೆಯಲ್ಲಿ ‘‘ಎಲ್ಲ ಸಮುದಾಯಗಳನ್ನೂ ಸಮಾನವಾಗಿ ನೋಡಲಾಗುವುದು ’’ಎಂಬ ಪ್ರಧಾನಿಯವರ ಭರವಸೆ ಮಹತ್ವವನ್ನು ಪಡೆದುಕೊಂಡಿದೆ.
ದೇಶಾದ್ಯಂತ ಮುಸ್ಲಿಮರಲ್ಲಿ ಮನೆ ಮಾಡಿರುವ ಭೀತಿಯು ನಮ್ಮ ಭೇಟಿಯ ಪ್ರಮುಖ ವಿಷಯಗಳಲ್ಲೊಂದಾಗಿತ್ತು. ‘‘ನೀವು ಇಡೀ ದೇಶದ ಪ್ರಧಾನಿಯಾಗಿದ್ದೀರಿ ಮತ್ತು ಪ್ರಜೆಗಳು....ಅವರು ಯಾವುದೇ ಧರ್ಮಕ್ಕೆ ಸೇರಿರಲಿ, ತಾವು ಅಸುರಕ್ಷಿತರು ಎಂದು ಭಾವಿಸುವಂತಾಗಬಾರದು’’ ಎಂದು ತಾನು ಅವರಿಗೆ ತಿಳಿಸಿದ್ದೆ. ಇದಕ್ಕೆ ಉತ್ತರವಾಗಿ ಪ್ರಧಾನಿಯವರು,‘‘ ನಾವು ಎಲ್ಲ ಸಮುದಾಯಗಳನ್ನು ಸಮಾನವಾಗಿ ನೋಡಿಕೊಳ್ಳುತ್ತೇವೆ. ಧರ್ಮ ಅಥವಾ ಜಾತಿಯ ಆಧಾರದಲ್ಲಿ ಯಾವುದೇ ಪೂರ್ವಗ್ರಹವನ್ನು ನಾವು ನಂಬುವುದಿಲ್ಲ’’ಎಂದು ಭರವಸೆ ನೀಡಿದ್ದಾರೆ ಎಂದು ಜಮೀಯತ್ ಉಲಮಾ-ಇ-ಹಿಂದ್‌ನ ಅಧ್ಯಕ್ಷ ವೌಲಾನಾ ಕಾರಿ ಸೈಯದ್ ಮುಹಮ್ಮದ್ ಉಸ್ಮಾನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಮುಸ್ಲಿಮರ ಅಹವಾಲುಗಳನ್ನು ಮತ್ತು ಅವರ ಸಮಸ್ಯೆಗಳನ್ನು ಆಲಿಸಲು ವಿಶೇಷ ಸಮಿತಿಯೊಂದನ್ನು ರಚಿಸಲು ಸಹ ಮೋದಿಯವರು ಒಪ್ಪಿಕೊಂಡಿದ್ದಾರೆ ಎಂದರು.
ಪ್ರತಿ ಬಾರಿಯೂ ಪ್ರಧಾನಿಯವರನ್ನು ಭೇಟಿಯಾಗಲು ಸಾಧ್ಯವಿಲ್ಲ. ಹೀಗಾಗಿ ಮುಸ್ಲಿಮರು ತಮ್ಮ ಸಮಸ್ಯೆಗಳನ್ನು ದಾಖಲಿಸಲು ವೇದಿಕೆಯೊಂದರ ಅಗತ್ಯವಿದೆ ಎಂದು ಮಂಗಳವಾರ ಒಂದು ಗಂಟೆಗೂ ಅಧಿಕ ಕಾಲ ನಡೆದ ಮಾತುಕತೆಗಳ ಸಂದರ್ಭ ಮುಸ್ಲಿಂ ನಾಯಕರು ಒತ್ತಿ ಹೇಳಿದರು. ಇಂತಹ ವ್ಯವಸ್ಥೆಗೆ ಒಪ್ಪಿಕೊಂಡ ಮೋದಿಯವರು, ಸರಕಾರ ಮತ್ತು ಸಮುದಾಯದ ನಾಯಕರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.
ಆದರೆ ತಿವಳಿ ತಲಾಕ್ ವಿವಾದವನ್ನು ಮುಸ್ಲಿಂ ಸಮುದಾಯವೇ ನಿಭಾಯಿಸಬೇಕು ಎಂದು ನಿಯೋಗವು ಪ್ರತಿಪಾದಿಸಿದೆ. ಅದು ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಹೊರಗಿನ ಯಾವುದೇ ಕಾನೂನು ಅದನ್ನು ಇತ್ಯರ್ಥಗೊಳಿಸಲು ಸಾಧ್ಯವಿಲ್ಲ. ತ್ರಿವಳಿ ತಲಾಕ್‌ನ ದುರುಪಯೋಗದ ಬಗ್ಗೆ ನಾವೀಗಾಗಲೇ ಅರಿವನ್ನು ಮೂಡಿಸುತ್ತಿದ್ದೇವೆ ಎಂದು ವೌಲಾನಾ ಉಸ್ಮಾನ್ ತಿಳಿಸಿದರು.







