ವಿದ್ಯಾರ್ಥಿಯೊಂದಿಗೆ ಪರೀಕ್ಷಕರ ಅಮಾನವೀಯ ವರ್ತನೆ ಖಂಡಿಸಿ ಎಸ್‌ಐಓ ಪ್ರತಿಭಟನೆ

ಮಂಗಳೂರು, ಮೇ 10: ವೈದ್ಯಕೀಯ ಮತ್ತು ದಂತ ವೈದ್ಯ ಕೋರ್ಸ್‌ಗಳಿಗಾಗಿ ದೇಶಾದ್ಯಂತ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯೊಂದಿಗೆ ಪರೀಕ್ಷಕರು ಅಮಾನವೀಯವಾಗಿ ವರ್ತಿಸಿರುವುದನ್ನು ಖಂಡಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‌ಐಓ) ದ.ಕ. ಜಿಲ್ಲಾ ಸಮಿತಿಯು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ನೀಟ್‌ನ ಹೊಸ ಕಠಿಣ ನಿಯಮಾವಳಿಗಳನ್ನು ರಚಿಸಿದ ಸಿಬಿಎಸ್‌ಇ ಮಂಡಳಿಯು ಆ ನಿಯಮಗಳ ಕುರಿತು ಸರಿಯಾಗಿ ತಿಳುವಳಿಕೆ ನೀಡದಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಗೊಂದಲ ಉಂಟಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಎಸ್‌ಐಓ ರಾಜ್ಯ ಕಾರ್ಯದರ್ಶಿ ಝಾಹಿದ್ ಸಲೀಂ, ಎಸ್‌ಐಓ ದ.ಕ. ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್‌ಐಓ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಬಾಸಿತ್ ಉಪ್ಪಿನಂಗಡಿ, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ (ಜಿಐಒ)ನ ಮಂಗಳೂರು ನಗರಾಧ್ಯಕ್ಷೆ ಶಹನಾಝ್, ಮಂಗಳೂರು ನಗರಾಧ್ಯಕ್ಷ ಅಹ್ಮದ್ ಮುಬೀನ್, ನಗರ ಕಾರ್ಯದರ್ಶಿ ಮುಂಝಿರ್ ಹಸನ್, ನಿಝಾಂ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.