ಮೇ 18ರಂದು ನವೀಕೃತ ಗಂಗೊಳ್ಳಿ ಚರ್ಚ್ ಲೋಕಾರ್ಪಣೆ

ಉಡುಪಿ, ಮೇ 10: ನವೀಕೃತ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯದ ಆಶೀರ್ವಚನ ಹಾಗೂ ಉದ್ಘಾಟನಾ ಸಮಾರಂಭವು ಮೇ 18 ರಂದು ಬೆಳಗ್ಗೆ 9:45ಕ್ಕೆ ಜರಗಲಿದೆ ಎಂದು ಚರ್ಚಿನ ಧರ್ಮಗುರು ವಂ.ಆಲ್ಬರ್ಟ್ ಕ್ರಾಸ್ತಾ ತಿಳಿಸಿದ್ದಾರೆ.
ಕುಂದಾಪುರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಚರ್ಚಿನ ಆಶೀರ್ವಚನವನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ನೆರವೇರಿಸಿ, ಪವಿತ್ರ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ ಎಂದು ಹೇಳಿದರು. ಬಳಿಕ ನಡೆಯಲಿರುವ ಸಾರ್ವಜನಿಕ ಸಭೆಯ ಉಡುಪಿ ಧರ್ಮಾಧ್ಯಕ್ಷ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಗುಲ್ಬರ್ಗ ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ.ಡಾ.ರಾಬರ್ಟ್ ಮಿರಾಂದಾ, ಕುಂದಾಪುರ ವಲಯ ಪ್ರಧಾನ ಧರ್ಮ ಗುರು ವಂ.ಅನಿಲ್ ಡಿಸೋಜ, ಸಚಿವ ಪ್ರಮೋದ್ ಮಧ್ವರಾಜ್, ಸಂಸದ ಬಿ. ಎಸ್.ಯಡಿಯೂರಪ್ಪ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮೊದಲಾದವರು ಭಾಗವಹಿಸಲಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿನೋದ್ ಗಂಗೊಳ್ಳಿ ರಚಿಸಿ ನಿರ್ದೇಶಿಸಿದ ಅಮ್ಮ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಮೇ 14ರಂದು ಭ್ರಾತ್ವತ್ವದ ಭಾನುವಾರ ಆಚರಣೆಯೊಂದಿಗೆ ಕೊಸೆಸಾಂವ್ ಅಮ್ಮನವರ ಮೂರ್ತಿಯ ಮೆರವಣಿಗೆ ನಡೆಯಲಿದ್ದು, 15ರಂದು ಅಪರಾಹ್ನ 3 ಗಂಟೆಗೆ ಸೌಹಾರ್ದ ಹೊರೆಕಾಣಿಕೆ ಮೆರವಣಿಗೆ ಹಾಗೂ ಸಂಜೆ 4:30ಕ್ಕೆ ಸರ್ವಧರ್ಮ ಸೌಹಾರ್ದ ಕೂಟ ನಡೆಯಲಿದೆ. ಮೇ 17ರಂದು ಸ್ಥಳೀಯ ಕ್ರೈಸ್ತ ಧಾರ್ಮಿಕರ ಸಮಾಗಮ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ತಾ, ಕಾರ್ಯದರ್ಶಿ ಪ್ರೀತಿ ಫೆರ್ನಾಂಡಿಸ್, ಮಾಧ್ಯಮ ಸಂಚಾಲಕಿ ಚಾರ್ಲೆಟ್ ಲೋಬೊ ಉಪಸ್ಥಿತರಿದ್ದರು.







